ಬೆಂಗಳೂರು, ಮಾ.30- ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಪುಟದ 10 ಸಚಿವರು ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿರುವುದೇ ಅವರ ಸಾಧನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ನಗರದಲ್ಲಿ ಏರ್ಪಡಿಸಿದ್ದ ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ಕಾಂಗ್ರೆಸ್ ಸಾಧನಾ ನಡಿಗೆ ಮತ್ತು ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಡಿ ನೋಟಿಫಿಕೇಷನ್, ಗಣಿ ಅಕ್ರಮ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಸಚಿವರು ಜೈಲಿಗೆ ಹೋಗಿರುವುದು ರಾಜ್ಯಕ್ಕೆ ದೊಡ್ಡ ಕಳಂಕ. ಅಷ್ಟೇ ಅಲ್ಲ. ಡಿನೋಟಿಫೈ ಅಕ್ರಮ ನಡೆಸಿ ಮುಖ್ಯಮಂತ್ರಿ ಅವರೇ ಜೈಲಿಗೆ ಹೋಗಿರುವುದು ದೇಶದಲ್ಲೇ ದಾಖಲೆಯಾಗಿ ಹೋಗಿದೆ. ಇಷ್ಟೆಲ್ಲಾ ಅಕ್ರಮಗಳಿಗೆ ಹೆಸರಾಗಿರುವ ಬಿಜೆಪಿಯನ್ನು ಜನತೆ ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ ಎಂದು ಅವರು ಟೀಕಿಸಿದರು.
ಶತಮಾನದಿಂದಲೂ ಗಾರ್ಡನ್ ಸಿಟಿ ಎಂದೇ ಹೆಸರಾಗಿದ್ದ ಬೆಂಗಳೂರು ನಗರವನ್ನು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಸ ನಿರ್ವಹಣೆ ಮಾಡದೆ ಗಾರ್ಬೆಜ್ ಸಿಟಿ ಎಂದು ಕುಖ್ಯಾತಿ ಗಳಿಸುವಂತೆ ಮಾಡಲಾಯಿತು. ಇದು ಅಂತಾರಾಷ್ಟ್ರೀಯ ಮಟ್ಟಕ್ಕೆ ಸುದ್ದಿಯಾಗಿ ನಗರ ಮರ್ಯಾದೆ ಮಣ್ಣು ಪಾಲಾಯಿತು. ಆದರೆ ನಂತರ ಬಂದ ಕಾಂಗ್ರೆಸ್ ಸರ್ಕಾರ ನಗರಕ್ಕೆ ಬಿಜೆಪಿ ತಂದು ಕೊಟ್ಟಿದ್ದ ಕೆಟ್ಟ ಹೆಸರು ಸರಿಪಡಿಸಲು ಶ್ರಮಿಸಬೇಕಾಯಿತು ಎಂದು ಹೇಳಿದರು.
ಇನ್ನು ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತ ಇದ್ದಾಗ ಪಾರಂಪರಿಕ ಕಟ್ಟಡ ಕೆ.ಆರ್. ಮಾರುಕಟ್ಟೆ ಸೇರಿದಂತೆ ಪ್ರಮುಖ ಆಸ್ತಿಗಳನ್ನೇ ಅಡಮಾನವಿಟ್ಟು ದಿವಾಳಿ ಮಾಡಲಾಗಿತ್ತು. ಆದನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆಡಮಾನದಿಂದ ಮುಕ್ತಗೊಳಿಸಿದೆ. ಈ ಮೂಲಕ ಕಾಂಗ್ರೆಸ್ ಬೆಂಗಳೂರಿನ ಗೌರವನ್ನು ಉಳಿಸಿ ಬೆಳೆಸಿದೆ ಎಂದು ದಿನೇಶ್ ಗುಂಡೂರಾವ್ ವಿವರಿಸಿದರು.
ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಮ್ಮ ರಾಜ್ಯ ನಂ.1 ಸ್ಥಾನದಲ್ಲಿದೆ. ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ನಮ್ಮ ರಾಜ್ಯ 11ನೆ ಸ್ಥಾನದಲ್ಲಿತ್ತು ಎಂದರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ರಾಜ್ಯದಲ್ಲಿ ವ್ಯಾಪಾರ ಮಾಡಲು ಬಂದಿದ್ದಾರೆ. ಅವರ ವ್ಯಾಪಾರಿ ಮನೋಭಾವನೆಗೆ ಜನರು ತಲೆಬಾಗುವುದಿಲ್ಲ ಎಂದು ಕಿಡಿಕಾರಿದರು.
ಮಹಾಲಕ್ಷ್ಮಿ ಬಡಾವಣೆಯಲ್ಲಿ ಕಾಂಗ್ರೆಸ್‍ನ ಶಕ್ತಿ ಏನೆಂಬುದಕ್ಕೆ ಇಲ್ಲಿನ ಜನಸಾಗರವೇ ಸಾಕ್ಷಿ. ನಮ್ಮ ಪಕ್ಷ ತೊರೆದು ಹೋದ ಕೆಲವರು 45 ದಿನಗಳ ನಂತರ ಪಶ್ಚಾತ್ತಾಪ ಪಡುತ್ತಾರೆ ಎಂದು ರೇವಣ್ಣ ಪರೋಕ್ಷವಾಗಿ ಎಂ.ನಾಗರಾಜ್ ಮತ್ತು ನೆ.ಲ.ನರೇಂದ್ರಬಾಬು ಅವರನ್ನು ಟೀಕಿಸಿದರು.
ಸಮಾರಂಭಕ್ಕೂ ಮುನ್ನ ಬಿಬಿಎಂಪಿ ಆಡಳಿತ ಪಕ್ಷ ನಾಯಕ ಶಿವರಾಜು ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ರ್ಯಾಲಿ ನಡೆಸಿ ಶಕ್ತಿಪ್ರದರ್ಶನ ಮಾಡಿದರು.
ಸುಮಾರು 10ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸಿದ್ದರು. ಯಾತ್ರೆಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಕಾಂಗ್ರೆಸ್ ಮುಖಂಡರಾದ ಸಿ.ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ್, ಸಲೀಂ ಅಹಮದ್ ಮತ್ತಿತರರು ಭಾಗವಹಿಸಿದ್ದರು.