ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರನ್ನು ಗಡಿಪಾರು ಮಾಡಬೇಕು: ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಆಗ್ರಹ

ಬೆಂಗಳೂರು, ಮಾ.30- ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕಕ್ಕೆ ಬಂದು ಪದೇ ಪದೇ ಕಾನೂನು ಉಲ್ಲಂಘನೆ ಮಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರನ್ನು ಗಡಿಪಾರು ಮಾಡಬೇಕು. ಮತ್ತೆ ಅವರನ್ನು ರಾಜ್ಯಕ್ಕೆ ಕಾಲಿಡದಂತೆ ನಿರ್ಬಂಧ ವಿಧಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ ಅವರು ಈಗಾಗಲೇ ಎರಡು ಬಾರಿ ಕಾನೂನ ಉಲ್ಲಂಘಿಸಿ ನೀತಿ ಸಂಹಿತೆಯನ್ನು ಮೀರಿದ್ದಾರೆ. ನಿನ್ನೆ ಮೈಸೂರು ಪ್ರವಾಸದ ವೇಳೆ ಇತ್ತೀಚೆಗೆ ಕೊಲೆಯಾದ ರಾಜು ಅವರ ಕುಟುಂಬಕ್ಕೆ ಅಮಿತ್ ಶಾ 5 ಲಕ್ಷ ರೂ. ನೀಡಿದ್ದಾರೆ. ಚುನಾವಣೆ ವೇಳೆ ಈ ರೀತಿ ಬಹಿರಂಗವಾಗಿ ಹಣ ನೀಡುವುದು ಅಪರಾಧ ಎಂದರು.

ಈ ಮೊದಲು ಕೂಡ ಅಮಿತ್ ಶಾ ಕಾನೂನು ಮೀರಿ ನಡೆದುಕೊಂಡಿದ್ದರು. ಜೈಲಿಗೆ ಹೋಗಿ ಬಂದಿರುವ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಇಬ್ಬರೂ ಕ್ರಿಮಿನಲ್ ಚಟುವಟಿಕೆಗಳನ್ನು ಕಲಿತುಕೊಂಡು ಬಂದಿದ್ದಾರೆ. ಅದನ್ನು ಬಳಸಿಕೊಂಡು ದೇಶಕಟ್ಟುವುದಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಮಿತ್ ಶಾ ನೀತಿ ಸಂಹಿತೆ ಉಲ್ಲಂಘನೆ ಮಾಡುವುದನ್ನು ಕಾಂಗ್ರೆಸ್ ಖಂಡಿಸುತ್ತಿದ್ದು, ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ, ಮೈಸೂರು ಜಿಲ್ಲೆಯ ಚುನಾವಣಾಧಿಕಾರಿಗೆ ದೂರು ನೀಡುತ್ತಿದೆ. ಶಾ ಅವರನ್ನು ಕೂಡಲೇ ಗಡಿಪಾರು ಮಾಡಬೇಕು. ಮತ್ತೆ ಮುಂದಿನ ದಿನಗಳಲ್ಲಿ ಅವರು ಕರ್ನಾಟಕಕ್ಕೆ ಭೇಟಿ ನೀಡುವುದನ್ನು ನಿಷೇಧಿಸಬೇಕೆಂದು ದಿನೇಶ್‍ಗುಂಡೂರಾವ್ ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ