ಚಿರತೆಗಳು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಆತಂಕ ಮೂಡಿಸುತ್ತಿವೆ

ಕುಣಿಗಲ್, ಮಾ.30-ತಾಲೂಕಿನಲ್ಲಿ ಚಿರತೆಗಳು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಆತಂಕ ಮೂಡಿಸುತ್ತಿವೆ. ಈ ನಡುವೆ ಇಂದು ಚಿರತೆಯೊಂದನ್ನು ಸೆರೆಹಿಡಿಯಲಾಗಿದ್ದು, ಮತ್ತೊಂದು ಮೃತಪಟ್ಟ ಚಿರತೆ ಪತ್ತೆಯಾಗಿದೆ.

ತಾಲೂಕಿನ ಕೊತ್ತಗೆರೆ ಹೋಬಳಿ ಕಲ್ಲುಪಾಳ್ಯ ಗ್ರಾಮದ ರೈತ ಗಂಗಾಧರಯ್ಯ ಎಂಬುವರ ತೋಟದ ಬಾವಿಯಿದ್ದು, ಕೆಲವು ವರ್ಷಗಳಿಂದ ನೀರಿಲ್ಲದೆ ಬಾವಿ ಪಾಳು ಬಿದ್ದಿದ್ದು, ಇದರ ಸುತ್ತಮುತ್ತ ಗಿಡಗಂಟೆಗಳು ದಟ್ಟವಾಗಿ ಬೆಳೆದು ನಿಂತಿವೆ. ಈ ವೇಳೆ ನೀರನ್ನು ಅರಸಿ ಬಂದ ಚಿರತೆ ಬಾವಿಯೊಳಗೆ ಬಿದ್ದಿದೆ. ಬಾವಿಯಿಂದ ಹೊರಬರಲಾಗದೆ ಪರದಾಡುತ್ತಿದ್ದ ಚಿರತೆಯ ಕೂಗಾಟದ ಶಬ್ಧ ಕೇಳಿದ ರೈತ ಗಂಗಾಧರಯ್ಯ ಕೂಡಲೇ ಸಾಮಾಜಿಕ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿ ರವಿ ಹಾಗೂ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಬಾವಿಯಿಂದ ಚಿರತೆಯನ್ನು ಮೇಲೆತ್ತಿದ್ದು, ಇದನ್ನು ಬನ್ನೇರಘಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಮತ್ತೊಂದು ಕಡೆ ತಾಲೂಕಿನ ಅಮೃತೂರು ಹೋಬಳಿ ಕಿಲಾರ ಕಾಲೋನಿ ಬಳಿ 8 ವರ್ಷದ ಗಂಡು ಚಿರತೆಯೊಂದು ಮೃತಪಟ್ಟಿದೆ.

ಮೃತ ಚಿರತೆಯನ್ನು ಕಂಡ ಗ್ರಾಮಸ್ಥರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿ ಹಾಗೂ ಪಶುವೈದ್ಯರು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಆಗಾಗ ತಾಲೂಕಿನಾದ್ಯಂತ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ