ಬೆಂಗಳೂರು, ಮಾ.29- ಈ ಬಾರಿಯ ವಿಧಾನಸಭಾ ಚುನಾವಣಾ ಕಣ ರಣಾಂಗಣವಾಗುವ ಎಲ್ಲ ಲಕ್ಷಣ ಕಾಣುತ್ತಿದೆ. ಸಿಎಂ ಸಿದ್ದರಾಮಯ್ಯ ಮಗನಿಗಾಗಿ ವರುಣಾ ಕ್ಷೇತ್ರ ಬಿಟ್ಟುಕೊಟ್ಟರೆ ಇತ್ತ ಯತೀಂದ್ರ ವಿರುದ್ಧ ತಮ್ಮ ಮಗ ವಿಜಯೇಂದ್ರರನ್ನು ಕಣಕ್ಕಿಳಿಸಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ.
ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿಗಳ ಮಕ್ಕಳ ಸ್ಪರ್ಧೆಯಿಂದ ವರುಣಾ ಕ್ಷೇತ್ರದ ಚುನಾವಣಾ ಕಣ ರಾಜ್ಯದ ಗಮನ ಸೆಳೆಯುತ್ತಿದೆ. ಈಗಾಗಲೇ ವರುಣಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಯಡಿಯೂರಪ್ಪ ಕೂಡಾ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ವರುಣಾದಲ್ಲಿ ಸಿಎಂ ಸಿದ್ದರಾಮಯ್ಯನ ಅಹಂಕಾರ ಮಟ್ಟ ಹಾಕಬೇಕು ಎಂದು ಬಿಜೆಪಿ ಕಾರ್ಯಕರ್ತರು ಒಳಗೊಳಗೆ ಅಖಾಡ ಸಿದ್ಧ ಮಾಡುತ್ತಿದ್ದಾರೆ. ಯತೀಂದ್ರ ವಿರುದ್ಧ ವಿಜಯೇಂದ್ರ ಸ್ಪರ್ಧಿಸುವಾದಾದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಅಂತ ಕಾಪು ಸಿದ್ದಲಿಂಗಸ್ವಾಮಿ ಕೂಡ ಹೇಳಿದ್ದಾರಂತೆ. ಹೀಗಾಗಿ, ವಿಜಯೇಂದ್ರ ಸ್ರರ್ಧೆಗೆ ವೇದಿಕೆ ಒಳಗೊಳಗೆ ಸಿದ್ಧವಾಗುತ್ತಿದೆ.
ಕಾಂಗ್ರೆಸ್‍ನ ಭದ್ರಕೋಟೆಯಾಗಿರುವ ವರುಣಾ ಕ್ಷೇತ್ರದಿಂದ ಕಣಕ್ಕಿಳಿಸಿ ಮಗನಿಗೆ ಭರ್ಜರಿ ರಾಜಕೀಯ ಎಂಟ್ರಿ ಕೊಡಿಸುವ ಉದ್ದೇಶ ಹೊಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕನಸಿಗೆ ತಣ್ಣೀರು ಎರಚಲು ಕಮಲ ಪಡೆ ತಂತ್ರ ರೂಪಿಸಿದೆ. ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಮತದಾರರೂ ಗಣನೀಯ ಪ್ರಮಾಣದಲ್ಲಿರುವುದು ಸಿದ್ದರಾಮಯ್ಯ ಆತಂಕ ಹೆಚ್ಚುವಂತೆ ಮಾಡಿದೆ.