ನವದೆಹಲಿ, ಮಾ.29-ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಸಂಸದ ಮತ್ತು ಹಿರಿಯ
ನಟ ಶತ್ರುಘ್ನ ಸಿನ್ಹ ಪಕ್ಷ ತೊರೆಯುವ ಕಾಲ ಸನ್ನಿಹಿತವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಬೇರೆ ಪಕ್ಷದಿಂದ ಸ್ಪರ್ಧಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಸುದ್ದಿವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ನನ್ನಂಥ ನಾಯಕರಿಗೆ ಮೋದಿ ಸರ್ಕಾರದಲ್ಲಿ ಮಾನ್ಯತೆ ಇಲ್ಲ. ನಮ್ಮನ್ನು ಅಲ್ಲಿ ತುಚ್ಚವಾಗಿ ಪರಿಗಣಿಸಲಾಗುತ್ತಿದೆ ಎಂದು ಶಾಟ್ಗನ್ ತೀವ್ರ ಅಸಮಾಧಾನಗೊಂಡಿದ್ಧಾರೆ.
2019ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ತೊರೆಯುವ ಬಗ್ಗೆ ಮುನ್ಸೂಚನೆ ನೀಡಿದ ಅವರು, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ತಾವು ಅನ್ಯ ಪಕ್ಷದಿಂದ ಸ್ಪರ್ಧಾ ಕಣಕ್ಕೆ ಇಳಿಯುವ ಸಾಧ್ಯತೆ ಬಗ್ಗೆಯೂ ತಿಳಿಸಿದ್ದಾರೆ.
ಬಿಹಾರದ ಪಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರ ನನ್ನ ರಾಜಕೀಯ ಕರ್ಮಭೂಮಿ. ಅಲ್ಲಿಂದಲೇ ತಾವು ಸ್ಪರ್ಧಿಸುವುದಾಗಿ ಹಾಗೂ ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ಬದಲಾಯಿಸುವುದಿಲ್ಲ ಎಂದು ಶತ್ರುಘ್ನ ಸಿನ್ಹ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಈಗಾಗಲೇ ಕೆಲವು ರಾಜಕೀಯ ಪಕ್ಷಗಳು ತಮಗೆ ಆಹ್ವಾನ ನೀಡಿವೆ. ನಾನು ಮುಂದೆ ರಾಜಕೀಯ ಪಕ್ಷವೊಂದರಿಂದ ಸ್ಪರ್ಧಿಸಬಹುದು ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಬಹುದು ಎಂಬುದನ್ನು ಕಾಲವೇ ನಿರ್ಧರಿಸುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ (2014) ನನಗೆ ಬಿಜೆಪಿಯಿಂದ ಟಿಕೆಟ್ ನೀಡುವುದಿಲ್ಲ ಎಂಬ ಸುದ್ದಿ ಇತ್ತು. ಕಟ್ಟಕಡೆಯ ಕ್ಷಣದಲ್ಲಿ ನನಗೆ ಟಿಕೆಟ್ ನೀಡಲಾಯಿತು. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿಯ ಸುದ್ದಿಗಳಿವೆ. ಕಳೆದ ಚುನಾವಣೆಯಲ್ಲಿ ನಾನು ನನ್ನ ಕ್ಷೇತ್ರದಲ್ಲಿ ದಾಖಲೆ ಮತಗಳಿಂದ ಜಯಸಾಧಿಸಿದೆ. ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ದೇಶದಲ್ಲೇ ಅತ್ಯಧಿಕ ಮತಗಳಿಗೆ ಗೆದ್ದ ಅಭ್ಯರ್ಥಿ ಎಂಬ ಹೆಗ್ಗಳಿಕೆ ಪಡೆದೆ. ನನಗೆ ಏಕೆ ಟಿಕೆಟ್ ನೀಡುವುದಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.