ಸಿಡ್ನಿ:ಮಾ-29: ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯನ್ ಕ್ರಿಕೆಟ್ ಗೆ ಇದೀಗ ಮತ್ತೊಂದು ಆಘಾತ ಎದುರಾಗಿದ್ದು. ಕ್ರಿಕೆಟ್ ಆಸ್ಟ್ರೇಲಿಯಾದ ಪ್ರಮುಖ ಪ್ರಾಯೋಜಕ ಸಂಸ್ಥೆ ಮೆಗಲ್ಲಾನ್ ತನ್ನ ಸಹಭಾಗಿತ್ವವನ್ನು ರದ್ದು ಮಾಡಿದೆ.
2017ರ ಆಗಸ್ಚ್ ತಿಂಗಳನಲ್ಲಿ ಮೆಗಲ್ಲಾನ್ ಸಂಸ್ಥೆ ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಆಸ್ಟ್ರೇಲಿಯಾ ದೇಶಿ ಕ್ರಿಕೆಟ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಿಗೆ ಹೆಸರಿನ ಪ್ರಾಯೋಜಕತ್ವ ನೀಡುವ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಆಸ್ಟ್ರೇಲಿಯಾ ಕ್ರಿಕೆಟಿಗರು ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ತುತ್ತಾಗಿದ್ದು, ಇದರಿಂದ ತನ್ನ ಸಂಸ್ಥೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮೆಗಲ್ಲಾನ್ ಸಂಸ್ಥೆ ಪ್ರಾಯೋಜಕತ್ವ ಒಪ್ಪಂದವನ್ನು ರದ್ದು ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮೆಗಲ್ಲಾನ್ ಸಂಸ್ಥೆಯ ವಕ್ತಾರರು, ಆಸಿಸ್ ಕ್ರಿಕೆಟಿಗ ಅಪ್ರಾಮಾಣಿಕ ನಡೆ ತಮ್ಮ ಗ್ರಾಹಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ತಮ್ಮ ಸಂಸ್ಥೆ ಈ ಕಠಿಣ ನಿರ್ಧಾರಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಅಲ್ಲದೇ ಚೆಂಡು ವಿರೂಪಗೊಳಿಸಿದ ಪ್ರಕರಣ ಸಂಬಂಧ ನಿಷೇದ ಶಿಕ್ಷೆಗೆ ಗುರಿಯಾಗಿರುವ ಡೇವಿಡ್ ವಾರ್ನರ್ ಮತ್ತು ಬ್ಯಾಂಕ್ರಾಫ್ಟ್ ಅವರಿಗೆ ಪ್ರಾಯೋಜಕತ್ವ ನೀಡಿದ್ದ ಖ್ಯಾತ ಕ್ರೀಡಾ ಪರಿಕರಗಳ ತಯಾರಿಕಾ ಸಂಸ್ಥೆ ಆ್ಯಸಿಕ್ಸ್ (ASICS) ಕೂಡ ತನ್ನ ಪ್ರಾಯೋಜಕತ್ವದಿಂದ ಹಿಂದಕ್ಕೆ ಸರಿದಿದೆ.