ಟಿ.ನರಸೀಪುರ, ಮಾ.29- ಟಿ.ನರಸೀಪುರ ಕ್ಷೇತ್ರದಲ್ಲಿ ಮರಳು ಮಾಫಿಯಾ ದೊರೆಗಳನ್ನು ಮಟ್ಟಹಾಕಿ ಜಾತ್ಯತೀತ ಜನತಾದಳ ಅಭ್ಯರ್ಥಿ ಎಂ.ಅಶ್ವಿನ್ಕುಮಾರ್ ಅವರನ್ನು ಬೆಂಬಲಿಸುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು.
ವಿಕಾಸ ಪರ್ವ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕಿನ ವಾಟಾಳು ಶ್ರೀ ಸೂರ್ಯ ಸಿಂಹಾನಸ ಮಠಕ್ಕೆ ತೆರಳಿ ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದು ನಂತರ ಮಾತನಾಡಿದರು.
ಟಿ.ನರಸೀಪುರದಲ್ಲಿ ಕ್ಷೇತ್ರದ ಸಚಿವರು ಹಾಗೂ ಅವರ ಮಕ್ಕಳು ಮರಳು ಮಾಫಿಯಾದಲ್ಲಿ ತೊಡಗಿ ಹಣ ಲೂಟಿ ಮಾಡುತ್ತಿದ್ದಾರೆ. ಇದನ್ನು ಕೊನೆಗಾಣಿಸಲು ಜನತೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷ ಬೆಂಬಲಿಸಿ ನಮ್ಮನ್ನು ಆಶೀರ್ವದಿಸುವಂತೆ ಅವರು ಮನವಿ ಮಾಡಿದರು.
ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಈವರೆಗೆ ಅಮಾಯಕ ಮರಳು ಕೂಲಿ ಕಾರ್ಮಿಕರ ಮೇಲೆ ಹಾಕಿರುವ ಮೊಕದ್ದಮೆ ವಾಪಸ್ ಪಡೆದು ಅವರಿಂದ ವಶಪಡಿಸಿಕೊಂಡಿರುವ ವಾಹನಗಳನ್ನು ಜಫ್ತಿ ಮಾಡಿದವರಿಂದಲೇ ಪರಿಹಾರ ಕೊಡಿಸುವುದಾಗಿ ತಿಳಿಸಿದರು.
ಅಧಿಕಾರದ ಆಸೆಗಾಗಿ ನಾನು ರಾಜ್ಯ ಪ್ರವಾಸ ಮಾಡುತ್ತಿಲ್ಲ. ನನ್ನ ಆನಾರೋಗ್ಯದ ನಡುವೆಯೂ ರೈತರ ಪರವಾಗಿ ಹೋರಾಟ ಮಾಡುತ್ತಿದ್ದು, ನಮ್ಮ ಹೋರಾಟ ರಾಜ್ಯದ ರೈತರ ಸಾಲಮನ್ನಾ ಮಾಡಿಸುವ ಸಲುವಾಗಿ ಮಾತ್ರ ಎಂದು ಹೇಳಿದರು.
ಇದಕ್ಕೂ ಮೊದಲು ತಾಲ್ಲೂಕಿನ ತಲಕಾಡು ಸಮೀಪದ ಮಡವಾಡಿ ಗ್ರಾಮಕ್ಕೆ ಆಗಮಿಸಿದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಸಹಸ್ತ್ರಾರು ಮಂದಿ ಕಾರ್ಯಕರ್ತರು ಸ್ವಾಗತ ನೀಡಿದರು.
ಆನಂತರ ತೆರೆದ ವಾಹನದಲ್ಲಿ ತಲಕಾಡು, ಹೆಮ್ಮಿಗೆ, ಮಾದಾಪುರ, ಮೂಗೂರು, ಮಾರ್ಗವಾಗಿ ಗ್ರಾಮಕ್ಕೆ ಆಗಮಿಸಿದ ರಾಜ್ಯಾಧ್ಯಕ್ಷರಿಗೆ ದಾರಿಯುದ್ದಕ್ಕೂ ಅಭಿಮಾನಿಗಳು ಭಾರೀ ಗಾತ್ರದ ರಾಗಿತೆನೆಯ ಹಾರ ಹಾಗೂ ವಿವಿಧ ಹೂಗಳ ಹಾರಗಳನ್ನು ಹಾಕಿಕ್ರೇನ್ಮೂಲಕ ಹಾಕಿ ಸ್ವಾಗತಿಸಿದರು.
ಟಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್ಕುಮಾರ್, ವರುಣಾ ಕ್ಷೇತ್ರದ ಅಭ್ಯರ್ಥಿ ಎಂ.ಎಂ.ಅಭಿಷೇಕ್, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಮೈಸೂರು ಮಾಜಿ ಮೇಯರ್ ರವಿಕುಮಾರ್, ಕಾರ್ಯಾಧ್ಯಕ್ಷ ಮಂಜುನಾಥ್, ಎಪಿಎಂಸಿ ಅಧ್ಯಕ್ಷ ವೆಂಕಟೇಶ್, ಕ್ಷೇತ್ರಾಧ್ಯಕ್ಷ ಚಿನ್ನಸ್ವಾಮಿ, ಬಾಣಸವಾಡಿ ನಾರಾಯಣಸ್ವಾಮಿ, ಬಿಎಸ್ಪಿ ಪ್ರಭುಸ್ವಾಮಿ, ಕೆಂಪಯ್ಯನ ಹುಂಡಿ ಬಾಲಕೃಷ್ಣ, ಶಿವಪ್ರಸಾದ್, ಬಸವರಾಜು, ವರುಣಾ ಕ್ಷೇತ್ರಾಧ್ಯಕ್ಷ ತಾಯೂರು ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಬೂದಹಳ್ಳಿ ಸಿದ್ದರಾಜು, ಚನ್ನೇಗೌಡ, ಹೆಮ್ಮಿಗೆ ಸೋಮಣ್ಣ, ಎಂ.ಆರ್.ಶಿವಮೂರ್ತಿ, ಹೊನ್ನನಾಯ್ಕ, ಮುಡುಕನಪುರ ಮಹದೇವಪ್ಪ, ಜಗದೀಶ್ಮೂರ್ತಿ, ಇತರರು ಇದ್ದರು.