ಮೈಸೂರು, ಮಾ.29-ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಏಳು ಬಾರಿ ಸ್ಪರ್ಧಿಸಿ ಐದು ಬಾರಿ ಗೆದ್ದಿದ್ದೇನೆ. ಎರಡು ಬಾರಿ ಸೋತಿದ್ದೇನೆ. ಈ ಬಾರಿಯೂ ಇಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿಯವರನ್ನು ಕೇಳಿಕೊಂಡು ನಾನು ರಾಜಕಾರಣ ಮಾಡಬೇಕಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಷ್ಟು ಬಾರಿ ಸ್ಪರ್ಧಿಸಿದ್ದೆ ಎಂಬುದು ಗೊತ್ತಾ ಎಂದು ಪ್ರಶ್ನಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ನನಗೆ ನಂಬಿಕೆ ಇದೆ. ಈ ಬಾರಿಯೂ ನಾನೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ನನ್ನನ್ನು ಕಂಡರೆ ಭಯ ಅದಕ್ಕಾಗಿ ನಾನು ಹೋದಲ್ಲೆಲ್ಲ ಅವರು ನನ್ನನ್ನು ಹಿಂಬಾಲಿಸುತ್ತಿದ್ದಾರೆ. ಅವರೆಲ್ಲಿಗಾದರೂ ಹೋಗಲಿ ಅದು ಅವರ ವೈಯಕ್ತಿಕ ವಿಚಾರ ಎಂದರು.
ಅಮಿತ್ ಷಾ ನನ್ನನ್ನು ಅಹಿಂದು ಎಂದು ಕರೆದಿದ್ದಾರೆ. ತಾವು ಹಿಂದೂನಾ ಅಥವಾ ಜೈನ್ರಾ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ಉಪ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲರೂ ಬಂದಿದ್ದರು. ಆದರೆ ಗೆದ್ದಿದ್ದು ಯಾರು ಎಂಬುದನ್ನು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ನಾನು ಸರ್ವಪಕ್ಷಗಳ ಸಭೆ ಕರೆದಿದ್ದೆ. ಆ ಸಭೆಗೆ ಯಡಿಯೂರಪ್ಪ, ಜಗದೀಶ್ಶೆಟ್ಟರ್, ಈಶ್ವರಪ್ಪ, ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿಯವರು ಬರಲಿಲ್ಲ. ಅನಂತ್ಕುಮಾರ್ ಮತ್ತು ಸದಾನಂದಗೌಡರು ಬಂದಿದ್ದರು. ಕೇಂದ್ರದಲ್ಲಿ ನಿಮ್ಮ ಸರ್ಕಾರವೇ ಇದೆ. ಸುಪ್ರೀಂಕೋರ್ಟ್ ಹೇಳಿದ್ದನ್ನಷ್ಟೇ ಮಾಡಬೇಕು ಅದರ ಹೊರತಾಗಿ ನೀವೇ ಹೊಣೆ ಎಂದು ಅವರಿಗೆ ತಿಳಿಸಿದ್ದೆ ಎಂದರು.
ಸುಪ್ರೀಂಕೋರ್ಟ್ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಲು ಹೇಳಿಲ್ಲ. ಸ್ಕೀಂ ಮಾಡುವಂತೆ ಸೂಚಿಸಿದೆ. ಹಾಗಾಗಿ ಅದನ್ನೇ ಮಾಡಬೇಕಿದೆ ಎಂದು ಹೇಳಿದರು.
ನಾಳೆ ಇಡೀ ದಿನ ವಿಶ್ರಾಂತಿ ಪಡೆಯುತ್ತೇನೆ. ನಾಗರಹೊಳೆ ರೆಸಾರ್ಟ್ನಲ್ಲಿ ತಂಗುತ್ತೇನೆ. ನಾಡಿದ್ದರಿಂದ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ. ಇಂದಿನಿಂದ ಐದು ದಿನಗಳ ಕಾಲ ಮೈಸೂರು ಪ್ರವಾಸದಲ್ಲಿರುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.