
ಮುಂಬೈ, ಮಾ.29- ಐಪಿಎಲ್11ರ ರಂಗು ಹೆಚ್ಚಿಸಲು ಕಾಲ ಸಮೀಪಿಸುತ್ತಿದ್ದು ಒಂದೆಡೆ ಕಳಂಕಿತ ಆಟಗಾರರಿಂದ ಸುದ್ದಿ ಆಗುತ್ತಿದ್ದರೆ, ಮತ್ತೊಂದೆಡೆ ಬಾಲಿವುಡ್ ಸ್ಟಾರ್ಗಳ ಪಾಲ್ಗೊಳ್ಳುವಿಕೆ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತದೆ. ಇತ್ತೀಚೆಗಷ್ಟೇ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ 15 ನಿಮಿಷ ಮನ ರಂಜಿಸಲು ರಣವೀರ್ಸಿಂಗ್ಗೆ 5 ಕೋಟಿ ಆಫರ್ ಬಂದ ಸುದ್ದಿ ಬಿತ್ತರಗೊಂಡಿದ್ದರೆ, ಈಗ ಮತ್ತೊಬ್ಬ ಬಾಲಿವುಡ್ ನಟ ವರುಣ್ಧವನ್ಗೆ 6 ಕೋಟಿ ಕೊಡಲು ಆಯೋಜಕರು ಮುಂದಾಗಿದ್ದಾರೆ.
2018ರ ಉದ್ಘಾಟನಾ ಪಂದ್ಯವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವುದರಿಂದ ಅದರ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಳಿಸಲು ಬಾಲಿವುಡ್ನ ತಾರೆಯರಾದ ರಣವೀರ್ಸಿಂಗ್, ವರುಣ್ಧವನ್, ಪ್ರಣೀತಿ ಚೋಪ್ರಾ, ಜಾಕ್ವೆಲಿನ್ ಫರ್ನಾಂಡೀಸ್ರಿಂದ ಬೊಂಬಾಟ್
ಡ್ಯಾನ್ಸ್ ಶೋಗಳನ್ನು ಆಯೋಜಿಸಿದ್ದು, ತಾರೆಗಳ ಬೇಡಿಕೆಗಳ ಆಧಾರದ ಮೇಲೆ ಸಂಭಾವನೆಯನ್ನು ನೀಡಲಾಗಿದೆ. ರಣವೀರ್ಸಿಂಗ್ ಹಾಗೂ ವರುಣ್ಧವನ್ ಅವರು ಬಾಲಿವುಡ್ನ ಸಮಕಾಲೀನ ಯುವ ನಟರುಗಳೇ ಆಗಿದ್ದರೂ ಕೂಡ ಧವನ್ಗೆ , ರಣವೀರ್ಸಿಂಗ್ಗಿಂತ 1 ಕೋಟಿ ಹೆಚ್ಚು ವರಮಾನ ಸಿಕ್ಕಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಅಂತಾರ್ಜಾಲದಲ್ಲಿ ರಣವೀರ್ಸಿಂಗ್ಗಿಂತ ವರುಣ್ಗೆ ಹೆಚ್ಚು ಫಾಲೋಯರ್ಸ್ಗಳು ಇರುವುದರಿಂದಲೇ ಧವನ್ಗೆ ಹೆಚ್ಚು ವರಮಾನ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ವರುಣ್ಧವನ್ ನಟಿಸಿದ್ದ ಬದ್ರಿನಾಥ್ ಕಿ ದುಲ್ಹಾನಿಯಾ ಮತ್ತು ಜುಡ್ವಾ 2 ಇತ್ತೀಚೆಗೆ ಬಾಲಿವುಡ್ನಲ್ಲಿ ಭಾರೀ ಸದ್ದು ಮಾಡಿದ್ದರೆ, ರಣವೀರ್ಸಿಂಗ್ನ ಪದ್ಮಾವತಿ 100 ಕೋಟಿ ಕ್ಲಬ್ ಅನ್ನು ಸೇರಿಕೊಂಡಿದೆ.