ಬೆಂಗಳೂರು, ಮಾ.29- ಚುನಾವಣೆ ಸಮೀಪಿಸುತ್ತಿದ್ದಂತೆ ಒಂದೆಡೆ ರಾಜಕೀಯ ಪಕ್ಷಗಳ ಚಟುವಟಿಕೆಗಳು ಚುರುಕುಗೊಳ್ಳುತ್ತಿದ್ದು, ಇನ್ನೊಂದೆಡೆ ಸೈದ್ದಾಂತಿಕ ಸಂಘಟನೆಗಳೂ ಕೂಡ ಗರಿಬಿಚ್ಚಲಾರಂಭಿಸಿವೆ.
ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಅವರ ನೇತೃತ್ವದ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆ ಜಾತ್ಯಾತೀತ ಮತಗಳು ವಿಭಜನೆಯಾಗದಂತೆ ಸ್ಪಷ್ಟ ಕಾರ್ಯಕತಂತ್ರ ರೂಪಿಸುವಂತೆ ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರಲಾರಂಭಿಸಿದೆ.
ಇಂದು ಬೆಳಗ್ಗೆ ಸುಬ್ಬಯ್ಯ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಲ್ಲದೆ, ಜಾತ್ಯಾತೀತ ನಿಲುವು ಹೋಂದಿರುವ ಪಕ್ಷಗಳ ಜತೆ ಮಾತುಕತೆ ನಡೆಸಿ ಜಾತ್ಯಾತೀತ ಮತಗಳು ವಿಭಜನೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿತು.
ಇದಕ್ಕೆ ತಾತ್ವಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಪಕ್ಷದ ಒಳಗಿರುವ ಕೆಲವು ಮುಖಂಡರಿಂದಾಗಿ ಜೆಡಿಎಸ್ನಂತಹ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಒಳಗಿನ ಬಿಕ್ಕಟ್ಟನ್ನು ಸರಿಪಡಿಸಿಕೊಂಡು ಸಿದ್ದರಾಮಯ್ಯ ಅವರು ಜಾತ್ಯಾತೀತ ಶಕ್ತಿಗಳನ್ನು ಒಕ್ಕೂಡಿಸುವ ಪ್ರಯತ್ನ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಸುಬ್ಬಯ್ಯ ಹೇಳಿದರು.
ಇತ್ತೀಚೆಗೆ ತಮ್ಮ ಸಮಿತಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಅವರೂ ಕೂಡ ಈ ವಿಷಯವಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜಾತ್ಯಾತೀತ ಮತಗಳು ಒಗ್ಗೂಡಲು ಎಲ್ಲಾ ರೀತಿಯ ಸಹಕಾರ ನೀಡಲು ನಾವು ಸಿದ್ದ. ಯಾವ ಯಾವ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹಿಂಪಡೆಯಬೇಕೆಂದು ಪ್ರಗತಿಪರರು ಪಟ್ಟಿ ನೀಡಿದ್ದಾರೆ. ಪರಿಶೀಲನೆ ನಡೆಸುವುದಾಗಿ ದೇವೇಗೌಡರು ಹೇಳಿದರು. ಆದರೆ, ಕುಮಾರಸ್ವಾಮಿ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಮಾತುಕತೆ ಪೂರ್ಣಗೊಂಡಿಲ್ಲ.
ಹಾಗೆಂದು ನಾವು ಪ್ರಯತ್ನವನ್ನು ಕೈ ಬಿಡುವುದಿಲ್ಲ. ಇಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದೇವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳಬೇಕು ಎಂಬುದು ನಮ್ಮ ಒತ್ತಾಯ ಅಲ್ಲ. ಆದರೆ, ಕೋಮುವಾದಿ ಪಕ್ಷಗಳನ್ನು ಅಧಿಕಾರದಿಂದ ದೂರ ಇಡಲು ಅಗತ್ಯ ಕಾರ್ಯತಂತ್ರ ರೂಪಿಸಲು ಒತ್ತಡ ಹೇರಿದ್ದೇವೆ. ಕಾಂಗ್ರೆಸನ್ನು ಹೊರತುಪಡಿಸಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ಹಾಗಾಗಿ ಕಾಂಗ್ರೆಸ್ನ್ನು ಒಳಗೊಂಡಂತೆ ಕಾರ್ಯತಂತ್ರ ರೂಪಿಸುವ ಅಗತ್ಯವಿದೆ.
ಜಾತ್ಯಾತೀತ ಶಕ್ತಿಗಳೇ ಪರಸ್ಪರ ಪೈಪೆÇೀಟಿಗಿಳಿದರೆ ಬಿಜೆಪಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ. ಅದಕ್ಕೆ ಅವಕಾಶ ನೀಡಬೇಡಿ ಎಂದು ಎಲ್ಲ ಮುಖಂಡರಲ್ಲು ಮನವಿ ಮಾಡುತ್ತೇವೆ ಎಂದರು.
ಸಮಿತಿಯ ಮುಖಂಡ ಕೆ.ಎಲ್.ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಅವರ ಮುಂದೆ ಮೂರು ಬೇಡಿಕೆಗಳನ್ನು ಇಟ್ಟಿದ್ದೇವೆ. ಮತಾಂಧ ಶಕ್ತಿಗಳನ್ನು ಸೋಲಿಸಬೇಕು. ಜನಪರ ಚಳವಳಿಗಳ ನಾಯಕರನ್ನು ಗೆಲ್ಲಿಸಲು ಸಹಕರಿಸಬೇಕು. ಜನರಪರ ಚಳವಳಿಗಳು ಮುಂದಿಟ್ಟಿರುವ ಐದಾರು ಪ್ರಮುಖ ಬೇಡಿಕೆಗಳನ್ನು ಪಕ್ಷದ ಪ್ರನಾಳಿಕೆಯಲ್ಲಿ ಅಳವಡಿಸಬೇಕು. ಜಾತ್ಯಾತೀತ ಮತ ವಿಭಜನೆಯಾಗದಂತೆ ಪ್ರತಿ ಕ್ಷೇತ್ರವಾರು ಕಾರ್ಯತಂತ್ರ ರೂಪಿಸಬೇಕೆಂದು ಮನವಿ ಮಾಡುವುದಾಗಿ ಹೇಳಿದರು.