ನವದೆಹಲಿ, ಮಾ 28-ಭಾರತೀಯ ರೈಲ್ವೆ ಬೃಹತ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮನ್ವಂತರದತ್ತ ದಾಪುಗಾಲು ಹಾಕುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಸಾಕಾರಗೊಳಿಸುವ ಉಪಕ್ರಮವಾಗಿ ಜೂನ್ ತಿಂಗಳಿನಿಂದ ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸುವ ಸಕಲ ಸೌಲಭ್ಯಗಳಿರುವ ಐಷಾರಾಮಿ ರೈಲು ಮೆಟ್ರೋ ಜಾಲ ಮತ್ತು ಉಪನಗರಗಳಲ್ಲಿ ಸಂಚರಿಸಲಿದೆ.
ಇಂಟರ್‍ಸಿಟಿ ಸಂಚಾರಕ್ಕಾಗಿ ದೇಶೀಯವಾಗಿ ನಿರ್ಮಿಸಲಾದ ಸೆಮಿ ಹೈಸ್ಪೀಡ್ ರೈಲು ಸೇವೆಯನ್ನು ಭಾರತೀಯ ರೈಲ್ವೆಯಲ್ಲೂ ಆರಂಭಿಸಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ಈ ರೈಲಿಗೆ ಟ್ರೈನ್-18 ಎಂದು ಹೆಸರಿಡಲಾಗಿದೆ. ದೀರ್ಘ ಕಾಲದಿಂದಲೂ ಈ ಯೋಜನೆ ಬಗ್ಗೆ ನಡೆಯುತ್ತಿದ್ದ ಸಂಶೋಧನೆ ಮತ್ತು ಅಭಿವೃದ್ಧಿ ಸಾಕಾರಗೊಂಡಿದ್ದು, ಭಾರತೀಯ ರೈಲು ಜಾಲದಲ್ಲಿ 160 ಕಿ.ಮೀ. ವೇಗದಲ್ಲಿ ಸಂಚರಿಸುವ ಪ್ರಪ್ರಥಮ ರೈಲು ಇದಾಗಲಿದೆ.
ಈಗಾಗಲೇ ಜನಪ್ರಿಯವಾಗಿರುವ ಶತಾಬ್ಧಿ ಎಕ್ಸ್‍ಪ್ರೆಸ್ ರೈಲಿಗೆ ಪರ್ಯಾಯವಾಗಿ ರೂಪುಗೊಂಡಿರುವ ಟ್ರೈನ್-18 ಪ್ರಯಾಣಿಕರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಸೇವಾ ಸೌಲಭ್ಯಗಳನ್ನು ಒದಗಿಸಲಿದೆ.
ವಿಶ್ವದರ್ಜೆಯ ಸೌಲಭ್ಯಗಳಿರುವ ಈ ರೈಲು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್)ಯಲ್ಲಿ ನಿರ್ಮಾಣವಾಗಿದೆ. ಪ್ರಯಾಣಿಕರು ಆರಾಮಾವಾಗಿ ಪ್ರಯಾಣಿಸಲು ಮೆತ್ತನೆಯ ಸುಖಾಸೀನ ಆಸನ ಸೌಲಭ್ಯಗಳು, ಯುರೋಪ್‍ನ ಶ್ರೇಷ್ಠ ದರ್ಜೆಯ ರೈಲುಗಳಲ್ಲಿರುವ ಅತ್ಯಾಕರ್ಷಕ ಒಳಾಂಗಣ ವಿನ್ಯಾಸ, ಸುಸಜ್ಜಿತ ಸೇವಾ ಸೌಲಭ್ಯಗಳು ಈ ರೈಲಿನಲ್ಲಿ ಲಭ್ಯ.
16 ಆಸನಗಳುಳ್ಳ ಛೇರ್‍ಕಾರ್ ಮಾದರಿಯ ಬೋಗಿಗಳನ್ನು ಹೊಂದಿರುವ ಭಾರತದ ಪ್ರಪ್ರಥಮ ರೈಲು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಎಕ್ಸ್‍ಕ್ಯೂಟಿವ್ ಮತ್ತು ನಾನ್‍ಎಕ್ಸಿಕ್ಯೂಟಿವ್ ವರ್ಗಗಳಲ್ಲಿ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಪ್ರಯಾಣ ಭಾಗ್ಯ ದೊರೆಯಲಿದೆ.
ಎಕ್ಸಿಕ್ಯೂಟಿವ್ ಛೇರ್ ಕ್ಲಾಸ್‍ನಲ್ಲಿ 56 ಪ್ರಯಾಣಿಕರು ಹಾಗೂ ನಾನ್‍ಎಕ್ಸಿಕ್ಯೂಟಿವ್ ವಿಭಾಗದಲ್ಲಿ 78 ಪ್ರಯಾಣಿಕರು ಸಂಚರಿಸಬಹುದು.
ಟ್ರೈನ್-18 ಸಂಪೂರ್ಣ ಸ್ಟೈನ್‍ಲೆಸ್‍ಸ್ಟೀಲ್ ಕವಚವನ್ನು ಹೊಂದಿದ್ದು, ಅಗತ್ಯವಿದ್ದರೆ ಗಂಟೆಗೆ 180 ಕಿ.ಮೀ. ಗರಿಷ್ಠ ವೇಗದಲ್ಲಿ ಚಲಿಸುವ ಸಾಮಥ್ರ್ಯ ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತ ಸೌಲಭ್ಯ ಹೊಂದಿರುವ ಈ ರೈಲಿನಲ್ಲಿ ದೊಡ್ಡದಾದ ಸ್ಫಟಿಕ ಸ್ಪಷ್ಟ ಗಾಜಿನ ಕಿಟಕಿಗಳಿವೆ. ಜಪಾನ್ ಮತ್ತು ಚೀನಾ ಬುಲೆಟ್ ಟ್ರೈನ್ ಮಾದರಿಯ ಈ ಸೆಮಿ ಹೈಸ್ಪೀಡ್ ರೈಲಿನಲ್ಲಿ ಪ್ರಯಾಣಿಕರಿಗಾಗಿ ಆನ್‍ಬೋರ್ಡ್ ವೈ-ಫೈ ಮತ್ತು ಇನ್‍ಫೆÇೀಟೈನ್‍ಮೆಂಟ್ (ಮಾಹಿತಿ ಮತ್ತು ಮನರಂಜನೆ) ಹೊಂದಿದೆ.
ಅಲ್ಲದೆ ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಅತ್ಯಾಧುನಿಕ ಎಲ್‍ಇಡಿ ದೀಪಗಳು, ಗರಿಷ್ಠ ಸ್ವಚ್ಛತೆಯ ಜೈವಿಕ ನಿರ್ವಾತ ಶೌಚಾಲಯಗಳಿರುವುದು ಈ ರೈಲಿನ ವಿಶೇಷ.