ಬೆಂಗಳೂರು, ಮಾ 28-ರಾಜ್ಯದ 191 ಕೆಎಫ್ಸಿಎಸ್ಸಿಯು ಗೋಡಾನ್ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಲೋಡ್, ಅನ್ಲೋಡಿಂಗ್ ಕಾರ್ಮಿಕರು ಮೂಲಭೂತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಲ್ಲಾ ಗೋಡಾನ್ಗಳ ಮುಂದೆ ಏ.5 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಲೋಡಿಂಗ್ ಮತ್ತು ಅನ್ಲೋಡಿಂಗ್ ಕಾರ್ಮಿಕ ಸಂಘದ ಅಧ್ಯಕ್ಷ ಜಿ.ಆರ್.ಶಿವಶಂಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಫ್ಸಿಎಸ್ಸಿಯು ಗೋಡಾನ್ಗಳಲ್ಲಿ 2 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಲೋಡಿಂಗ್ ಮತ್ತು ಅನ್ಲೋಡಿಂಗ್ ಕೆಲಸವನ್ನು 1973 ರಿಂದ ನಿರಂತರವಾಗಿ ನಿರ್ವಹಿಸುತ್ತಿದಾರೆ. ಕಾರ್ಮಿಕರಿಗೆ ಯಾವುದೇ ಮೂಲಭೂತ ಸವಲತ್ತುಗಳನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಹಾಗೂ ಗ್ರಾಹಕರ ಇಲಾಖೆ ನೀಡುತ್ತಿಲ್ಲ. ಆಹಾರ ನಾಗರಿಕ ಸರಬರಾಜುಗಳ ಸಚಿವರ ಸಮ್ಮುಖದಲ್ಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಹಲವಾರು ಸಭೆಗಳನ್ನು ನಡೆಸಿದ್ದರು. ನಮ್ಮ ಬೇಡಿಕೆಗಳನ್ನು ಈಡೇರಿಸುವ ತೀರ್ಮಾನವಾಗಿದ್ದರೂ ಸಹ ಇಲಾಖೆಯ ಉನ್ನತ ಅಧಿಕಾರಿಗಳು ಸಾರಿಗೆ ಗುತ್ತಿಗೆದಾರರು ಶಾಮೀಲಾಗಿ ನಿರಂತರವಾಗಿ ನೌಕರರನ್ನು ಶೋಷಣೆ ಮಾಡುತ್ತಿದಾರೆ. ಎಲ್ಲಾ ಅಧಿಕಾರಿಗಳ ಧೋರಣೆ ಬಗ್ಗೆ ನೌಕರರು ಆರೋಪಿಸಿದ್ದು, ಸರ್ಕಾರ ಮೌನ ವಹಿಸಿರುವುದನ್ನು ಖಂಡಿಸುತ್ತೇವೆ ಎಂದರು.
ಕಾರ್ಮಿಕರಿಗೆ ರಜೆ ಸವಲತ್ತು, ಉದ್ಯೋಗ ಪತ್ರ, ಗುರುತಿನ ಚೀಟಿ, ವೇತನ ಚೀಟಿನೀಡಬೇಕು, ಹೆಚ್ಚುವರಿಕೆಲಸಕ್ಕೆ ಹೆಚ್ಚುವರಿ ಹಣ ನೀಡಬೇಕು, ಇಎಸ್ಐ-ಪಿಎಫ್ ಸೌಲಭ್ಯ, ಕಾರ್ಮಿಕರಿಗೆ ಅಪಘಾತವಾದಾಗ ಪರಿಹಾರ, ಗ್ರಾಜ್ಯುಟಿ ಸೌಲಭ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.