ಕಲಾಪಗಳಿಗೆ ನಿರಂತರ ಅಡ್ಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅಸಮಾಧಾನ

ನವದೆಹಲಿ, ಮಾ.28-ಕಲಾಪಗಳಿಗೆ ನಿರಂತರವಾಗಿ ಅಡ್ಡಿಯಾಗಿರುತ್ತಿರುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾಜ್ಯಸಭೆಯಲ್ಲಿ ಅಸಮಾಧಾನ ಸೂಚಿಸಿದರು. ನಿವೃತ್ತರಾಗುತ್ತಿರುವ ಸದಸ್ಯರು ತ್ರಿವಳಿ ತಲಾಖ್‍ನಂಥ ಪ್ರಮುಖ ಮಸೂದೆಗಳ ಕುರಿತ ಮಹತ್ವದ ಚರ್ಚೆಗಳಲ್ಲಿ ಭಾಗವಹಿಸಲು ಸಾಧ್ಯವಾಗದ ಅಂಶವನ್ನು ಅವರು ತಮ್ಮ ಸಂಕ್ಷಿಪ್ತ ಭಾಷಣದಲ್ಲಿ ಪ್ರಸ್ತಾಪಿಸಿ ಇದೊಂದು ದುರುದೃಷ್ಟಕರ ಎಂದು ಹೇಳಿದರು. ಅವರ ತಮ್ಮ ಭಾಷಣದಲ್ಲಿ ಕಲಾಪದಲ್ಲಿ ಗದ್ದಲ ಅಥವಾ ಕೋಲಾಹಲ ಎಂಬ ಪದವನ್ನು ಬಳಸದೇ ಅಡ್ಡಿ ಎಂದು ಹೇಳಿದ್ದು ವಿಶೇಷವಾಗಿತ್ತು. ನಿರ್ಗಮಿಸುತ್ತಿರುವ ಮೇಲ್ಮನೆ ಸದಸ್ಯರು ಮುಖ್ಯ ವಿಚಾರಗಳ ಕುರಿತು ತಮ್ಮ ಭಾಷಣಗಳನ್ನು ಸಿದ್ದಪಡಿಸಿಕೊಳ್ಳಬೇಕು. ಆಗ ಅವರ ಕೊಡುಗೆಗಳನ್ನು ನೆನೆಪಿನಲ್ಲಿಟ್ಟುಕೊಳ್ಳಬಹುದು ಎಂದು ಪ್ರಧಾನಿ ತಿಳಿಸಿದರು. ರಾಜ್ಯಸಭೆಯಲ್ಲಿ ವಿವಿಧ ಕ್ಷೇತ್ರಗಳ ಖ್ಯಾತನಾಮ ಸದಸ್ಯರುಗಳಿದ್ದಾರೆ. ಸಂಸತ್ತಿನ ಮೇಲ್ಮನೆಯು ಭಾರತ ಪ್ರಜಾಪ್ರಭುತ್ವದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಮೋದಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ