ಬೆಂಗಳೂರು, ಮಾ.28- ಚುನಾವಣೆ ಸಂದರ್ಭದಲ್ಲಿ ವಿವಿಪ್ಯಾಟ್ ಬಳಕೆ ಮತ್ತು ಮತದಾನದ ಮಹತ್ವ ಕುರಿತು ನೀವು ನಿಮ್ಮ ಸುತ್ತಮುತ್ತಲಿನ ಜನತೆಗೆ ಅರಿವು ಮೂಡಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ವಿದ್ಯಾರ್ಥಿಗಳಿಗೆ ಇಂದಿಲ್ಲಿ ಕರೆ ನೀಡಿದರು.
ಕೊಂಡಜ್ಜಿ ಬನಪ್ಪ ಸಭಾಂಗಣದಲ್ಲಿ ಎನ್ಸಿಸಿ, ಎನ್ಎಸ್ಎಸ್ ಹಾಗೂ ಇತರೆ ವಿದ್ಯಾರ್ಥಿಗಳಿಗೆ ಮತದಾನದ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಅಭಿಯಾನದಲ್ಲಿ ಪಾಲ್ಗೊಂಡಿದ್ದ ವಿವಿಧ ಕಾಲೇಜಿನ 400ಕ್ಕೂ ವಿದ್ಯಾರ್ಥಿಗಳಿಗೆ ವಿವಿಪ್ಯಾಟ್ ಬಳಕೆ ಹಾಗೂ ಮತದಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮಂಜುನಾಥ್ ಪ್ರಸಾದ್ ಅರಿವು ಮೂಡಿಸಿದರು.
ನಮಗೆ ಭವಿಷ್ಯದಲ್ಲಿ ಅನುಕೂಲವಾಗಬೇಕಾದರೆ ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಹಾಗಾಗಿ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳುವುದು ಅವಶ್ಯಕ.
ಇದೇ ಪ್ರಥಮ ಬಾರಿಗೆ ವಿವಿಪ್ಯಾಟ್ ಬಳಕೆ ಮಾಡಲಾಗುತ್ತಿದೆ. ಮತ ಯಾರಿಗೆ ಹಾಕಿದ್ದೇವೆ ಎಂಬುದು 7 ಸೆಕೆಂಡ್ನಲ್ಲಿ ವಿವಿಪ್ಯಾಟ್ನಲ್ಲಿ ಕಾಣಲಿದೆ. ಇದನ್ನು ನಿಮ್ಮ ಮನೆಯವರಿಗೆ, ಸುತ್ತಮುತ್ತಲಿನ ನಾಗರಿಕರಿಗೂ ಇದರ ಬಳಕೆ ಬಗ್ಗೆ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.
ಮತದಾರರ ಪಟ್ಟಿಯಲ್ಲಿ ಯಾರ ಹೆಸರು ಇಲ್ಲವೋ ಅವರು ಈಗಲೂ ಹೆಸರು ಸೇರಿಸಲು ಅವಕಾಶವಿದೆ. ಏ.14ರವರೆಗೆ ಸೇರಿಸಬಹುದು. ನೀವು ಆನ್ಲೈನ್ನಲ್ಲಿ ಅರ್ಜಿಸಲ್ಲಿಸಿ ಹೆಸರು ನೋಂದಾಯಿಸಬಹುದು ಎಂದರು.
ಈಗಾಗಲೇ ಹೆಸರು ನೋಂದಾಯಿಸಿದ್ದೇವೆ, ಹೆಸರಿರುತ್ತೆ ಎಂಬ ಉಡಾಫೆ ಬೇಡ. ಆನ್ಲೈನ್ನಲ್ಲಿ ಪರಿಶೀಲಿಸಿ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಹೆಸರು ಇಲ್ಲದಿದ್ದರೆ ಸಮಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಮೇ 12ಕ್ಕೆ ಮತದಾನ ನಡೆಯಲಿದ್ದು, ಮೇ 5ರೊಳಗೆ ಫೆÇೀಟೋ ಸಹಿತ ಎಲೆಕ್ಷನ್ ಗುರುತಿನ ಚೀಟಿಯನ್ನು ಭೂತ್ಮಟ್ಟದ ಅಧಿಕಾರಿಗಳು ಸಲ್ಲಿಸುತ್ತಾರೆ. ತಲುಪದೆ ಇದ್ದರೆ ಮತದಾನ ದಿನ ಮತಕೇಂದ್ರದ ಬಳಿ ಇರುವ ಕೇಂದ್ರದಲ್ಲಿ ನಡೆಯಬಹುದು.
ಎರಡು ಕಿ.ಮೀ. ಒಳಗೆ ಒಂದೊಂದು ಮತದಾನಕೇಂದ್ರ ಇರುತ್ತೆ. ಹಾಗಾಗಿ ನೀವು ನಿಮ್ಮ ಮನೆಯವರು, ಅಕ್ಕಪಕ್ಕದವರನ್ನು ಕರೆತಂದು ಮತಹಾಕಿಸಿ ಚುನಾವಣೆಯಂತಹ ಮಹತ್ವದ ಕಾರ್ಯದಲ್ಲಿ ಎನ್ಎಸ್ಎಸ್, ಎನ್ಸಿಸಿ ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಿ ನೀವು ನಿಮ್ಮ ಜವಾಬ್ದಾರಿ ಅರಿತು ಉತ್ತಮ ಶಾಸಕರನ್ನು ಆರಿಸಬೇಕೆಂದು ಕಿವಿಮಾತು ಹೇಳಿದರು.
ಈ ವೇಳೆ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.