ಬೆಂಗಳೂರು, ಮಾ.28- ಒಂದೇ ರಾತ್ರಿ ಇಡೀ ನಗರದ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಮತ್ತು ರಾಜಕೀಯ ಮುಖಂಡರ ಜಾಹೀರಾತು ಫಲಕಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.
ನಿನ್ನೆ ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಜಾಹೀರಾತು ಫಲಕಗಳ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ವಿಶೇಷ ಹಣಕಾಸು ಆಯುಕ್ತರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಎಲ್ಲ ಎಂಟು ವಲಯಗಳಲ್ಲಿರುವ ಅನಧಿಕೃತ ಕಟೌಟ್, ಬ್ಯಾನರ್, ಬಂಟಿಂಗ್ಸ್ ತೆರವು ಕಾರ್ಯಕ್ಕೆ ಸೂಚನೆ ನೀಡಿದ್ದರು.
ಚುನಾವಣಾಧಿಕಾರಿಗಳ ಸೂಚನೆ ಮೇರೆಗೆ 20 ಪ್ರಹರಿ ವಾಹನ ಮತ್ತು ನುರಿತ ತಂಡಗಳು ನಗರದಾದ್ಯಂತ ಜಾಹೀರಾತು ಫಲಕ ತೆರವು ಕಾರ್ಯಾಚರಣೆ ಕೈಗೊಂಡವು.
ಯಲಹಂಕ, ದಾಸರಹಳ್ಳಿ, ರಾಜರಾಜೇಶ್ವರಿನಗರ, ಕೆಂಗೇರಿ, ಬೆಂಗಳೂರು ದಕ್ಷಿಣ, ಉತ್ತರ, ಪೂರ್ವ ಹಾಗೂ ಪಶ್ಚಿಮ ವಲಯದಲ್ಲಿ ಏಕಾಏಕಿ ಕಾರ್ಯಾಚರಣೆ ಕೈಗೊಂಡು ಒಂದೇ ರಾತ್ರಿ ನಗರದ ವಿವಿಧೆಡೆ ಅಳವಡಿಸಲಾಗಿದ್ದ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದೆ.
ಚುನಾವಣಾ ನೀತಿ-ಸಂಹಿತೆ ಜಾರಿಯಲ್ಲಿರುವುದರಿಂದ ನಗರದ ಯಾವುದೇ ಭಾಗದಲ್ಲೂ ಅನಧಿಕೃತ ಜಾಹೀರಾತು ಫಲಕಗಳನ್ನು ಅಳವಡಿಸುವಂತಿಲ್ಲ. ಒಂದು ವೇಳೆ ಜಾಹೀರಾತು ಅಳವಡಿಕೆ ಅವಶ್ಯವಿದ್ದರೆ ಚುನಾವಣಾ ಆಯೋಗದ ಅನುಮತಿ ಪಡೆದುಕೊಳ್ಳಬೇಕು.
ಇಲ್ಲದಿದ್ದಲ್ಲಿ ಜಾಹೀರಾತು ಫಲಕ ಪ್ರದರ್ಶಿಸುವ ವ್ಯಕ್ತಿ ಅಥವಾ ಪಕ್ಷಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.
ಬಸ್ ತಂಗುದಾಣಗಳ ಮೇಲೆ ಅಳವಡಿಸಲಾಗಿದ್ದ ರಾಜಕೀಯ ಮುಖಂಡರ ಭಾವಚಿತ್ರಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗಿದೆ. ಇಂದಿರಾ ಕ್ಯಾಂಟಿನ್ ಲೋಗೋ ಮೇಲೆ ಅಳವಡಿಸಿರುವ ಇಂದಿರಾಗಾಂಧಿ ಅವರ ಭಾವಚಿತ್ರ ಹೊರತುಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರ ನಾಯಕರುಗಳ ಚಿತ್ರಗಳನ್ನು ತೆಗೆದು ಹಾಕಲಾಗಿದೆ.