ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಹತ್ಯೆ : ಮರು ತನಿಖೆ ಅರ್ಜಿ ವಜಾ

ನವದೆಹಲಿ, ಮಾ.28-ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಹತ್ಯೆ ಬಗ್ಗೆ ಮರು ತನಿಖೆ ನಡೆಸುವಂತೆ ಕೋರಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.
ಮುಂಬೈ ಮೂಲದ ಅಭಿನವ್ ಭಾರತ್ ಚಾರಿಟಬಲ್ ಟ್ರಸ್ಟ್‍ನ ವಿಶ್ವಸ್ಥರಾದ ಪಂಕಜ್ ಪಡ್ನಾವಿಸ್ ಅವರಿಂದ ಈ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ ಮತ್ತು ಎಲ್. ನಾಗೇಶ್ವರ ರಾವ್ ಅವರನ್ನು ಒಳಗೊಂಡ ಪೀಠ ಮನವಿಯನ್ನು ತಳ್ಳಿ ಹಾಕಿದೆ.
ಮಹಾತ್ಮ ಗಾಂಧಿ ಅವರ ಹತ್ಯೆ ಪ್ರಕರಣದ ಬಗ್ಗೆ ಮರು ತನಿಖೆ ನಡೆಸುವಂತೆ ಕೋರಿರುವ ಅರ್ಜಿಯು ಶೈಕ್ಷಣಿಕ ಸಂಶೋಧನೆ ಆಧರಿತವಾಗಿದೆ. ಹಲವಾರು ವರ್ಷಗಳ ಹಿಂದೆ ನಡೆದ ಈ ಘಟನೆ ಬಗ್ಗೆ ಮತ್ತೆ ತನಿಖೆ ನಡೆಸಲು ಇದೊಂದೇ ಆಧಾರವಾಗುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.
ಇದೇ ಪ್ರಕರಣದ ಸಂಬಂಧ ಮಾರ್ಚ್ 6ರಂದು ತನ್ನ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಿದ್ದ ಸುಪ್ರೀಂಕೋರ್ಟ್, ಈ ಪ್ರಕರಣದಲ್ಲಿ ಭಾವನಾತ್ಮಕ ವಿಷಯಗಳನ್ನು ಪರಿಗಣಿಸಲು ಸಾಧ್ಯವಿಲ್ಲ. ಅರ್ಜಿ ಕುರಿತು ಕಾನೂನು ಅಂಶಗಳನ್ನೂ ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿತ್ತು.
ಗಲ್ಲು ಶಿಕ್ಷೆಗೆ ವಿಧಿಸಲ್ಪಟ್ಟ ಗಾಂಧಿ ಹಂತಕರಾದ ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಅಪ್ಟೆ ಅವರನ್ನು ವಿವಿಧ ನ್ಯಾಯಾಲಯಗಳು ಮೂರು ಗುಂಡುಗಳ ಸಿದ್ಧಾಂತ ಮೇಲೆ ಶಿಕ್ಷೆ ವಿಧಿಸಿವೆ. ಆದರೆ ಗೋಡ್ಸೆ ಅಲ್ಲದೇ ಬೇರೊಬ್ಬನಿಂದ ನಾಲ್ಕನೇ ಗುಂಡು ಹಾರಿಸಲಾಗಿದೆಯೇ ಎಂಬ ಅನುಮಾನಗಳ ಬಗ್ಗೆ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಪಂಕಜ್ ತಮ್ಮ ಮನವಿಯಲ್ಲಿ ಕೋರಿದ್ದರು.
30ನೆ ಜನವರಿ 1948ರಂದು ಗಾಂಧಿ ಅವರು ಹಿಂದು ರಾಷ್ಟ್ರೀಯವಾದಿ ಕಾರ್ಯಕರ್ತ ನಾಥುರಾಮ್ ಗೋಡ್ಸೆ ಗುಂಡಿಗೆ ಬಲಿಯಾದರು. ನವದೆಹಲಿಯ ಬಿರ್ಲಾ ಭವನದ ಮೈದಾನದಲ್ಲಿ ತಮ್ಮ ರಾತ್ರಿಯ ವಾಯುವಿಹಾರದಲ್ಲಿ ತೊಡಗಿದ್ದ ಬಾಪು ಅವರನ್ನು ಗೋಡ್ಸೆ ಕೊಂದು ಹಾಕಿದ. ಭಾರತದ ಮುಸಲ್ಮಾನರ ಪರವಾಗಿ ಗಾಂಧಿ ತಾರತಮ್ಯ ಮಾಡುತ್ತಿದ್ದಾರೆ ಎಂಬುದು ಗೋಡ್ಸೆಯ ಆರೋಪವಾಗಿತ್ತು. 8ನೇ ನವೆಂಬರ್ 1949ರಲ್ಲಿ ಗೋಡ್ಸೆಯನ್ನು ನೇಣುಗಂಬಕ್ಕೆ ಏರಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ