
ಬೆಂಗಳೂರು, ಮಾ.28- ಶಿವಮೊಗ್ಗದಲ್ಲಿನ ಜಿಲ್ಲಾ ಕಾರಾಗೃಹವನ್ನು ಉನ್ನತ್ತೀಕರಿಸಿ ಕೇಂದ್ರ ಕಾರಾಗೃಹವನ್ನಾಗಿ ಘೋಷಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಶಿವಮೊಗ್ಗ ತಾಲ್ಲೂಕು ಸೋಗಾನೆ ಗ್ರಾಮದ ಸರ್ವೆ ನಂ.120ರಲ್ಲಿ 62.02 ಎಕರೆ ಜಮೀನಿನಲ್ಲಿ ನೂತನ ಕಾರಾಗೃಹ ಕಟ್ಟಡಗಳನ್ನು ಶಿವಮೊಗ್ಗ ಕೇಂದ್ರ ಕಾರಾಗೃಹ ಎಂದು ಘೋಷಿಸಲಾಗಿದೆ. ನೂತನ ಕಾರಾಗೃಹ ಕಟ್ಟಡಗಳನ್ನು 79.76 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಸೌರಶಕ್ತಿ ದೀಪ ಅಳವಡಿಕೆ:
ರಾಜ್ಯದ 10ವಿವಿಧ ಕಾರಾಗೃಹಗಳಲ್ಲಿ ಬೆಳಕಿನ ಉಪಯೋಗಕ್ಕಾಗಿ ಸೌರಶಕ್ತಿ ದೀಪಗಳನ್ನು ಅಳವಡಿಸಲಾಗಿದೆ.
ಸೌರಶಕ್ತಿ ದೀಪಗಳ ಖರೀದಿಯ ಬಾಕಿ ಮೊತ್ತವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. 68.41ಲಕ್ಷ ರೂ.ವನ್ನು ಸೌರಶಕ್ತಿ ದೀಪ ಖರೀದಿ ಬಾಕಿ ಪಾವತಿಗಾಗಿ ಬಿಡುಗಡೆ ಮಾಡಿದ್ದು, ಮೂರನೇ ವ್ಯಕ್ತಿಯ ಪರಿಶೀಲನಾ ಕಾರ್ಯ ಪೂರ್ಣಗೊಂಡ ನಂತರ ಹಣ ಪಾವತಿಸುವ ಷರತ್ತನ್ನು ವಿಧಿಸಲಾಗಿದೆ.
ವೀರಶೈವ-ಲಿಂಗಾಯಿತ ಪ್ರಾತಿನಿಧ್ಯ ಹೆಚ್ಚಳಕ್ಕಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಇತರೆ ಪಕ್ಷಗಳು ಕನಿಷ್ಠ 100 ಟಿಕೆಟ್‍ಗಳನ್ನು ನೀಡಬೇಕು: ಆರ್.ಮಹೇಶ್ ಒತ್ತಾಯ
ಬೆಂಗಳೂರು, ಮಾ.28- ರಾಜಕೀಯದಲ್ಲಿ ವೀರಶೈವ-ಲಿಂಗಾಯಿತ ಪ್ರಾತಿನಿಧ್ಯ ಹೆಚ್ಚಳಕ್ಕಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಇತರೆ ಪಕ್ಷಗಳು ಕನಿಷ್ಠ 100 ಟಿಕೆಟ್‍ಗಳನ್ನು ವೀರಶೈವ-ಲಿಂಗಾಯಿತ ರಾಜಕೀಯ ನಾಯಕರಿಗೆ ನೀಡಬೇಕೆದು ವೀರಶೈವ ಲಿಂಗಾಯಿತ ಯುವ ಬ್ರಿಗೇಡ್‍ನ ರಾಜ್ಯಾಧ್ಯಕ್ಷ ಆರ್.ಮಹೇಶ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯಿತ ಸಮುದಾಯವು ಬಹಳ ಹಿಂದಿನಿಂದಲೂ ಕರ್ನಾಟಕದ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸುತ್ತಾ ಬಂದಿದೆ. ಬಹುದೊಡ್ಡ ಸಮಾಜವಾದ ವೀರಶೈವ-ಲಿಂಗಾಯಿತ ಸಮುದಾಯದ ಪ್ರಾತಿನಿಧ್ಯ ಕರ್ನಾಟಕ ವಿಧಾನಸಭಾ ಮತ್ತು ವಿಧಾನಪರಿಷತ್‍ನಲ್ಲಿ ಗಣನೀಯವಾಗಿ ಮತ್ತು ಶೋಚನೀಯವಾಗಿ ಕಡಿಮೆಯಾಗುತ್ತಾ ಬಂದಿರುವುದು ಸಮಾಜದ ಯುವಕರಲ್ಲಿ ಮತ್ತು ಹದಿಹರೆಯದವರಲ್ಲಿ ಅಸಮಾಧಾನ ಉಂಟು ಮಾಡಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಾರು 90 ಶಾಸಕರು ಲಿಂಗಾಯಿತ ಸಮುದಾಯದಿಂದ ಚುನಾಯಿತವಾಗಿದ್ದ ಸಂದರ್ಭವನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡಾಗ ಸಮಾಜದ ರಾಜಕೀಯ ಬಲಾಢ್ಯತೆಯ ಅರಿವು ಉಂಟಾಗ್ತುದೆ.
ಆದರೆ, ಇತ್ತೀಚೆಗೆ ನಮ್ಮ ಸಮುದಾಯದ ಶಾಸಕರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಬಹುಸಂಖ್ಯಾತರಿರುವ ಲಿಂಗಾಯಿತ ಕ್ಷೇತ್ರಕ್ಕೆ ಎಲ್ಲ ಪಕ್ಷಗಳು ಸೇರಿದಂತೆ ಸರಿಯಾದ ಪ್ರಾತಿನಿಧ್ಯ ನೀಡದೇ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವುದು ಎಲ್ಲ ರಾಜಕೀಯ ಪಕ್ಷಗಳ ವಿರುದ್ಧ ಸಿಡಿದೇಳಲು ಸೂಚನೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಇತರೆ ಪ್ರಾದೇಶಿಕ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ಕನಿಷ್ಠ ಪ್ರತಿಯೊಂದು ಪಕ್ಷದಿಂದ 100 ರಾಜಕೀಯ ನಾಯಕರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದೇವೆ ಎಂದರು.
ಈ ಮನವಿಯನ್ನು ಲಘುವಾಗಿ ಪರಿಗಣಿಸದೇ ಲಿಂಗಾಯಿತ ಸಮುದಾಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಿ ಇದುವರೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ವೀರಶೈವ-ಲಿಂಗಾಯಿತ ಯುವ ಬ್ರಿಗೇಡ್ ಒತ್ತಾಯಿಸಿದೆ.