ಬೆಂಗಳೂರು, ಮಾ.28- ರಾಜ್ಯ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಪುಟಿದೆದ್ದಿರುವ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಆರಂಭಿಸಿದೆ.
ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ಸಮಯವನ್ನು ವ್ಯರ್ಥ ಮಾಡದೆ ಮೊದಲ ಹಂತದಲ್ಲಿ 130 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ.
ಈಗಾಗಲೇ ಸಮೀಕ್ಷಾ ವರದಿ ಹಾಗೂ ಜಿಲ್ಲಾ ಸಮಿತಿಗಳ ವರದಿಯನ್ನು ರಾಜ್ಯ ಘಟಕಕ್ಕೆ ತರಿಸಿಕೊಳ್ಳಲಾಗಿದ್ದು, ಆಕಾಂಕ್ಷಿಗಳ ಪಟ್ಟಿಯನ್ನು ದೆಹಲಿಯ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಾಗಿದೆ.
ಮೂಲಗಳ ಪ್ರಕಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಸಹ ಉಸ್ತುವಾರಿ ಪಿಯೂಶ್ ಗೋಯಲ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವರಾದ ಅನಂತ್ಕುಮಾರ್, ಡಿ.ವಿ.ಸದಾನಂದಗೌಡ ಮತ್ತಿತರರು ನವದೆಹಲಿಗೆ ತೆರಳಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಷ್ಟ್ರೀಯ ನಾಯಕರ ಜತೆ ಚರ್ಚೆ ನಡೆಸಿ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ 130 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಂಭವವಿದೆ ಎಂದು ಪಕ್ಷದ ವಿಶ್ವಾಸನೀಯ ಮೂಲಗಳು ಹೇಳಿವೆ.
ಪಕ್ಷದ ಹಾಲಿ ಎಲ್ಲಾ ಶಾಸಕರಿಗೆ ಹಾಗೂ ಬೇರೆ ಬೇರೆ ಪಕ್ಷಗಳಿಂದ ಬಂದಿರುವವರಿಗೂ ಮೊದಲ ಪಟ್ಟಿಯಲ್ಲೇ ಟಿಕೆಟ್ ದೊರಕುವ ಲಕ್ಷಣಗಳಿವೆ. ಶಾಸಕರಾದ ಸಿ.ಪಿ.ಯೋಗೇಶ್ವರ್, ರಾಜೀವ್, ಮಾನಪ್ಪ ವಜ್ಜಲ್, ಡಾ.ಶಿವರಾಜ್ಪಾಟೀಲ್, ಸಿ.ಎಸ್.ಪಾಟೀಲ್ ನಡಹಳ್ಳಿ, ಮಲ್ಲಿಕಾರ್ಜುನ ಖೂಬಾ ಸೇರಿದಂತೆ ಮತ್ತಿತರರಿಗೆ ಟಿಕೆಟ್ ನೀಡಲು ವರಿಷ್ಠರು ಸಮ್ಮತಿಸಿದ್ದಾರೆ.
ಇನ್ನು 130 ಅಭ್ಯರ್ಥಿಗಳ ಪಟ್ಟಿಯಲ್ಲಿ 2013ರ ವಿಧಾನಸಭೆ ಚುನಾವಣೆ ವೇಳೆ 5ರಿಂದ 10 ಸಾವಿರ ಮತಗಳಿಂದ ಪರಾಭವಗೊಂಡಿರುವ ಅಭ್ಯರ್ಥಿಗಳಿಗೂ ಟಿಕೆಟ್ ಸಿಗಲಿದೆ. ಅಲ್ಲದೆ, ಈ ಹಿಂದೆ ಯಡಿಯೂರಪ್ಪ ಸ್ಥಾಪಿಸಿದ್ದ ಕೆಜೆಪಿಯಲ್ಲಿ ಗುರುತಿಸಿಕೊಂಡು ಸೋತಿದ್ದವರಿಗೂ ಟಿಕೆಟ್ ಸಿಗಲಿದೆ ಎಂದು ತಿಳಿದು ಬಂದಿದೆ.
ಬಿರುಸಿನ ಚಟುವಟಿಕೆ:
ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ನಿಗದಿಪಡಿಸುತ್ತಿದ್ದಂತೆ ಪಕ್ಷದೊಳಗೆ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಚುನಾವಣಾ ರಣತಂತ್ರ ಕುರಿತಂತೆ ಈಗಾಗಲೇ ರಾಷ್ಟ್ರಾಧ್ಯಕ್ಷರ ಜತೆ ನಿನ್ನೆಯೇ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಮತ ಚಟುವಟಿಕೆಗಳಿಗೆ ಅವಕಾಶ ಇಲ್ಲದಂತೆ ಎಚ್ಚರಿಕೆ ಹೆಜ್ಜೆ ಇಟ್ಟು ಅಭ್ಯರ್ಥಿ ಆಯ್ಕೆ ಮಾಡುವಂತೆ ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ ನಾವು ಒಗ್ಗಟ್ಟು ಪ್ರದರ್ಶಿಸುವುದು ಆನಿವಾರ್ಯ. ನಮ್ಮೊಳಗಿನ ಭಿನ್ನಮತ ಎದುರಾಳಿಗಳಿಗೆ ಅಸ್ತ್ರವಾಗಬಹುದು. ಟಿಕೆಟ್ ಕೈ ತಪ್ಪಿದವರು ಬಂಡಾಯ ಏಳದಂತೆ ಎಚ್ಚರವಹಿಸಬೇಕು. ಕೆಲವು ಸಂದರ್ಭಗಳಲ್ಲಿ ಪಕ್ಷಕ್ಕಾಗಿ ತ್ಯಾಗ ಮಾಡುವುದು ಅನಿವಾರ್ಯ ಎಂದು ಅಮಿತ್ ಶಾ ಹೇಳಿದ್ದಾರೆ.
ಕೆಲವು ಹೈವೋಲ್ಟೇಜ್ ಕೇಂದ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ನಾವು ನೋಡಿಕೊಳ್ಳುತ್ತೇವೆ. ಶಿವಮೊಗ್ಗ, ಶಿವಮೊಗ್ಗ ನಗರ, ಶಿಕಾರಿಪುರ, ಪದ್ಮನಾಭನಗರ ಸೇರಿದಂತೆ ಪ್ರಮುಖ ಕ್ಷೇತ್ರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ರಾಷ್ಟ್ರಾಧ್ಯಕ್ಷರು ಸೂಚ್ಯವಾಗಿ ಹೇಳಿದ್ದಾರೆ.