ಸಿಡ್ನಿ:ಮಾ-28: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ವಿರೂಪಗೊಳಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ಗೆ 12 ತಿಂಗಳ ನಿಷೇಧ ಹೇರಲಾಗಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯಲ್ಲಿ ಇಂದು ನಡೆದ ಸಭೆಯಲ್ಲಿ ಕಠಿಣ ಶಿಸ್ತುಕ್ರಮ ಜರುಗಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಆಸಿಸ್ ನಾಯಕ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ಗೆ 12 ತಿಂಗಳ ನಿಷೇಧ ಹೇರಲಾಗಿದೆ. ಅಂತೆಯೇ ಚೆಂಡು ವಿರೂಪಗೊಳಿಸಿದ ಬ್ಯಾಂಕ್ರಾಫ್ಟ್ ಗೂ 9 ತಿಂಗಳ ನಿಷೇಧ ಹೇರಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಮಾಜಿ ನಾಯಕನ ವಿರುದ್ಧ ಕೆಂಡಾಮಂಡಲವಾಗಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸ್ಮಿತ್ ಗೆ ಆಜೀವ ನಿಷೇಧ ಹೇರಲು ಮುಂದಾಗಿತ್ತಾದರೂ, ಹಿರಿಯ ಮಾಜಿ ಕ್ರಿಕೆಟಿಗರ ಸಲಹೆ ಮೇರೆಗೆ ಸ್ಮಿತ್ ಗೆ ಒಂದು ವರ್ಷ ನಿಷೇಧ ಹೇರಲು ನಿರ್ಧರಿಸಿದೆ. ಅಲ್ಲದೆ ಉಪನಾಯಕ ಡೇವಿಡ್ ವಾರ್ನರ್ ಗೂ ಇದೇ ಶಿಕ್ಷೆ ನೀಡಿದೆ.
ಚೆಂಡು ವಿರೂಪಗೊಳಿಸಿದ ಪ್ರಕರಣವನ್ನು ತನಿಖೆಗೆ ಒಳಪಡಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (ಸಿಎ) ನಿರ್ಧರಿಸಿತ್ತು. ಸಿಎ ಸೌಹಾರ್ದ ಘಟಕದ ಮುಖ್ಯಸ್ಥ ಇಯಾನ್ ರಾಯ್ ಮತ್ತು ಹೈ ಪರ್ಫಾರ್ಮೆನ್ಸ್ ವ್ಯವಸ್ಥಾಪಕ ಪ್ಯಾಟ್ ಹೊವಾರ್ಡ್ ಅವರನ್ನು ತನಿಖಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿತ್ತು. ಸೋಮವಾರ ಕೇಪ್ಟೌನ್ ತಲುಪಿದ್ದ ಇವರು, ತಂಡ ಉಳಿದುಕೊಂಡಿರುವ ಹೋಟೆಲ್ನಲ್ಲಿ ಆಟಗಾರರನ್ನು ವಿಚಾರಣೆಗೆ ಒಳಪಡಿಸಿದ್ದರು. ಅಂತೆಯೇ ಅಧಿಕಾರಿಗಳು ನಾಲ್ಕನೇ ಟೆಸ್ಟ್ಗಾಗಿ ತಂಡ ಜೊಹಾನ್ಸ್ಬರ್ಗ್ಗೆ ತೆರಳುವ ಮುನ್ನ ಮಾಹಿತಿ ಕಲೆ ಹಾಕಿ, ಕ್ರಿಕೆಟ್ ಆಸ್ಟ್ರೇಲಿಯಾಗೆ ವರದಿ ಕೂಡ ನೀಡಿದ್ದರು. ಈ ವರದಿಯನ್ನಾಧರಿಸಿ ಕ್ರಿಕೆಟ್ ಆಸ್ಟ್ರೇಲಿಯಾ ಆಸಿಸ್ ನಾಯಕ ಸ್ಮಿತ್ ಹಾಗೂ ಉಪ ನಾಯಕ ವಾರ್ನರ್ ಗೆ 12 ತಿಂಗಳ ಕ್ರಿಕೆಟ್ ನಿಷೇಧ ಹೇರಿದೆ.
Ball-Tampering Row, Steve Smith, David Warner Banned, For 12 Months By Cricket Australia