ಬೆಂಗಳೂರು, ಮಾ.27-ವರ್ಷದ ನಿರ್ದಿಷ್ಟ ಕಾಲವನ್ನು ಹೊರತುಪಡಿಸಿ ಇತರ ವೇಳೆಯಲ್ಲಿ ಅತಿಯಾಗಿ ಸೇವಿಸುವ ನೀರಿನಿಂದ ಆಹಾರ ಸಂಬಂಧಿಸಿದ ಸಮಸ್ಯೆಗಳು ಉಂಟಾಗಲಿದೆ ಎಂದು ಆಯುರ್ವೇದ ತಜ್ಞ ವೈದ್ಯ ಡಾ.ಪರಮೇಶ್ವರ ಅರೋರಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಯಾದ ನೀರು ಸೇವನೆಯಿಂದ ಪಿತ್ತ, ಕಫ ಸಂಬಂಧಿತ ಸಮಸ್ಯೆಗಳಾದ ಅಜೀರ್ಣ, ವಾಂತಿ, ಮೈ ಭಾರ, ನೆಗಡಿ, ಶೀತ ಸೇರಿದಂತೆ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಕಡಿಮೆ ಪ್ರಮಾಣದ ನೀರು ಸೇವನೆಯಿಂದ ಇಂತಹ ಸಮಸ್ಯೆಗಳಿಂದ ಹೊರಬರಲು ಸಾಧ್ಯ ಎಂದು ಸಲಹೆ ನೀಡಿದರು.
ನೀರನ್ನು ಕುಡಿಯುವ ಮೊದಲು ಅದನ್ನು ಔಷಧಿಯುಕ್ತವನ್ನಾಗಿ ಮಾಡುವ ಅವಶ್ಯಕತೆ ಇದೆ. ಇದಕ್ಕಾಗಿ ಅಗತ್ಯವಿರುವ ಗಿಡಮೂಲಿಕೆಗಳನ್ನು ನೀರಿನಲ್ಲಿ ಹಾಕಿ ಕುದಿಸಿದ ನಂತರ ಆರಿಸಿ ಅಥವಾ ಉಗುರು ಬೆಚ್ಚಗಿನ ಸ್ಥಿತಿಯಲ್ಲಿ ಕುಡಿಯುವುದರಿಂದ ಆರೋಗ್ಯ ವೃದ್ಧಿಯಾಗಲಿದೆ ಎಂದರು.
ಯಾವುದೇ ವ್ಯಕ್ತಿ ಯಾವುದೇ ವೇಳೆಯಲ್ಲಿ ಸರಿಯಾದ ಸಮಯವಿಲ್ಲದೆ, ನೀರು ಸೇವನೆ ಮಾಡುವುದರಿಂದ ಜೀರ್ಣವ್ಯವಸ್ಥೆ ಕುಂಠಿತಗೊಳ್ಳಲಿದೆ. ಜಠರದಲ್ಲಿರುವ ಜಠಾಗ್ನಿ ಪ್ರಮಾಣ ಹೆಚ್ಚು ನೀರು ಸೇವನೆಯಿಂದ ಕುಂಠಿತಗೊಳ್ಳುತ್ತದೆ. ಕಾರಣ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳಲಿದ್ದು, ಇದು ಇನ್ನಿತರ ಆರೋಗ್ಯ ಸಮಸ್ಯೆಗಳಾದ ಮಧುಮೇಹ, ಅತಿಯಾದ ರಕ್ತದೊತ್ತಡ, ಮೂತ್ರಪಿಂಡ ಹಾಗೂ ಹೃದಯಸಂಬಂಧಿ ಆರಂಭವಾಗಲಿದೆ ಎಂದರು.