ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ಮಮತಾ ಬ್ಯಾನರ್ಜಿ ಬಿರುಸಿನ ಚಾಲನೆ:

ನವದೆಹಲಿ, ಮಾ. 27-ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪರಮೋಚ್ಚ ನಾಯಕಿ ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ಬಿರುಸಿನ ಚಾಲನೆ ನೀಡಿದ್ದಾರೆ.

ನಿನ್ನೆ ರಾಜಧಾನಿ ದೆಹಲಿಗೆ ಆಗಮಿಸಿರುವ ಅವರು ಇಂದು ದಿನವಿಡಿ ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿದರು. ಬೆಳಗ್ಗೆ ಕಲವು ವಿರೋಧ ಪಕ್ಷಗಳ ಕೆಲವು ನಾಯಕರನ್ನು ಭೇಟಿ ಮಾಡಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಮಾಲೋಚಿಸಿದರು.

ಇಂದು ಸಂಜೆ ಅವರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‍ಸಿಪಿ) ನಾಯಕ ಶರದ್ ಪವಾರ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲಿದ್ದಾರೆ.  ಮಮತಾ ಅವರು ನಾಳೆ ಬೆಳಗ್ಗೆ ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ ಅವರನ್ನು ಬೇಟಿ ಮಾಡಿ ವಿರೋಧ ಪಕ್ಷಗಳು ಒಗ್ಗೂಡುವುದೂ ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಿದೆ.

ಮಮತಾ ಅವರ ದೆಹಲಿ ಭೇಟಿ ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತವೆ ಎಂಬ ಸ್ಪಷ್ಟ ಚಿತ್ರಣ ನಾಳೆ ಲಭಿಸುವ ಸಾಧ್ಯತೆ ಇದೆ.  2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಹುಜನ ಸಮಾಜ ಪಕ್ಷದ ನಾಯಕಿ ಮಾಯವತಿ ಮಹಾ ಮೈತ್ರಿಕೂಟಕ್ಕೆ ಒಲವು ವ್ಯಕ್ತಪಡಿಸಿರುವಾಗಲೇ ಮಮತಾ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ