ಮಂಡ್ಯ, ಮಾ.27-ವರದಕ್ಷಿಣೆ ಕಿರುಕುಳ ನೀಡಿ ಮಹಿಳೆ ಸಾವಿಗೆ ಕಾರಣರಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಕೆಯ ಪತಿಗೆ ಜೀವಾವಧಿ ಶಿಕ್ಷೆ, ಅತ್ತೆಗೆ ಎರಡು ವರ್ಷ ಜೈಲು ಶಿಕ್ಷೆ ನೀಡಿ ಮಂಡ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಮದ್ದೂರು ತಾಲೂಕು ಕೋಡಿದೊರೈ ಗ್ರಾಮದ ಚಿಕ್ಕಯ್ಯನ ಮಗ ಪರಮೇಶ್ಗೆ ಜೀವಾವಧಿ ಶಿಕ್ಷೆ ಹಾಗೂ 45 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಎಚ್.ಜಿ.ವಿಜಯಕುಮಾರಿ ತೀರ್ಪು ನೀಡಿದ್ದಾರೆ.
ಪರಮೇಶ್ ಎಂಬಾತನಿಗೆ ಮದ್ದೂರು ತಾಲೂಕು ಹೋಬಳಿಯ ಹುಲಿಕೆರೆ ಗ್ರಾಮದ ಕೆಂಚೇಗೌಡರ ಮಗಳು ರಶ್ನಿತಾಳನ್ನು 2012ರ ಮೇನಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಮದುವೆ ವೇಳೆ ಚಿನ್ನಾಭರಣ ಹಾಗೂ ಸಾಕಷ್ಟು ಹಣ ನೀಡಲಾಗಿತ್ತು.
ಮದುವೆ ನಂತರ ಪತಿ ಹಾಗೂ ಅತ್ತೆ, ಮಾವ ವರದಕ್ಷಿಣೆ ತರುವಂತೆ ರಶ್ಮಿತಾಗೆ ಹಿಂಸೆ ಕೊಟ್ಟಿದ್ದರು. ಕಿರುಕುಳ ತಾಳಲಾರದೆ 2013ರ ಮೇ 24ರಂದು ವಿಷ ಸೇವಿಸಿ ನೇಣು ಹಾಕಿಕೊಳ್ಳಲು ಯತ್ನಿಸಿ ವಿಫಲಳಾಗಿ ತೀವ್ರ ಅಸ್ವಸ್ಥಳಾಗಿದ್ದಳು. ಮೇ 31ರಂದು ಚಿಕಿತ್ಸೆ ಫಲಕಾರಿಯಾಗದೆ ಈಕೆ ಮೃತಪಟ್ಟಿದ್ದು, ಆರು ತಿಂಗಳ ಗರ್ಭಿಣಿಯಾಗಿದ್ದಳು.
ಕೊಪ್ಪ ಠಾಣೆಯಲ್ಲಿ ಗಂಡ, ಅತ್ತೆ, ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮಂಡ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇದೀಗ ತೀರ್ಪು ಹೊರಬಿದ್ದಿದೆ. ರಶ್ಮಿತಾಳ ಮಾವ ನಿಧನ ಹೊಂದಿದ್ದರಿಂದ ಗಂಡ ಹಾಗೂ ಅತ್ತೆಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿದೆ. ಸರ್ಕಾರದ ಪರವಾಗಿ ಎಚ್.ಜಿ.ಚಿನ್ನಪ್ಪ ವಾದ ಮಂಡಿಸಿದ್ದರು.