ನವದೆಹಲಿ,ಮಾ.27-ವಿದ್ಯುನ್ಮಾನ ಮತ ಯಂತ್ರ(ಇವಿಎಂ)ಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ರಾಜಕೀಯ ಪಕ್ಷಗಳ ಆರೋಪದ ನಡುವೆಯೂ ಭವಿಷ್ಯದಲ್ಲಿ ಜರುಗುವ ಚುನಾವಣೆಗೆ ವಿವಿ ಪ್ಯಾಟ್ಗಳನ್ನು ಬಳಸಲು ಆಯೋಗ ಮುಂದಾಗಿದೆ.
ಇತ್ತೀಚೆಗೆ ಉತ್ತರಪ್ರದೇಶ, ಉತ್ತರಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇವಿಎಂಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪ್ರಮುಖ ರಾಜಕೀಯ ಪಕ್ಷಗಳು ಆರೋಪ ಮಾಡಿ ಮತಪತ್ರ (ಬ್ಯಾಲೆಟ್)ಗಳನ್ನು ಬಳಸುವಂತೆ ಆಯೋಗಕ್ಕೆ ಮನವಿ ಮಾಡಿದ್ದರು.
ಇದನ್ನು ಸಾರಸಗಾಟವಾಗಿ ತಳ್ಳಿ ಹಾಕಿರುವ ಕೇಂದ್ರ ಚುನಾವಣಾ ಆಯೋಗ ಭವಿಷ್ಯದಲ್ಲಿ ನಡೆಯಲಿರುವ ಎಲ್ಲ ಚುನಾವಣೆಗೆ ಇವಿಎಂಗಳನ್ನು ಬಳಸುವುದರ ಜೊತೆಗೆ ಮತದಾರರು ತಾವು ಚಲಾಯಿಸಿದ ಮತವನ್ನು ಖಾತ್ರಿಪಡಿಸಿಕೊಳ್ಳಲು ವಿವಿ ಪ್ಯಾಟ್ ಬಳಸಿಕೊಳ್ಳಲಾಗುವುದು ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್ ದೆಹಲಿಯಲ್ಲಿಂದು ತಿಳಿಸಿದರು.
ಇವಿಎಂಗಳನ್ನು ಯಾರೊಬ್ಬರೂ ದುರುಪಯೋಗಪಡಿಸಿಕೊಳ್ಳುವುದಾಗಲಿ ಇಲ್ಲವೇ ತಿರುಚಲು ಸಾಧ್ಯವೇ ಇಲ್ಲ. ನಾವು ಈ ಹಿಂದೆಯೂ ಸ್ಪಷ್ಟಪಡಿಸಿರುವಂತೆ ಯಾರಿಗಾದರೂ ಅನುಮಾನ ಕಂಡುಬಂದರೆ ದೂರು ನೀಡಿದರೆ ಪರಿಶೀಲನೆ ಮಾಡುತ್ತೇವೆ. ಆದರೆ ಮತದಾರರಲ್ಲಿ ಗೊಂದಲ ಸೃಷ್ಟಿಸುವಂತಹ ಹೇಳಿಕೆಗಳನ್ನು ನೀಡಬಾರದೆಂದು ಮನವಿ ಮಾಡಿದರು.
ಆಯುಕ್ತರ ಈ ಹೇಳಿಕೆಯಿಂದ ಇವಿಎಂಗಳನ್ನು ಬಳಸದೆ ಬ್ಯಾಲೆಟ್ ಪೇಪರ್ಗಳನ್ನು ಬಳಸಬೇಕೆಂಬ ಕೂಗಿಗೆ ಹಿನ್ನಡೆಯಾಗಿದೆ.