![amit-shah-pti_650x400_51518963643](http://kannada.vartamitra.com/wp-content/uploads/2018/02/amit-shah-pti_650x400_51518963643-650x381.jpg)
ಶಿವಮೊಗ್ಗ, ಮಾ.27- ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯ ಬಗ್ಗೆಯಾಗಲಿ, ಭ್ರಷ್ಟಾಚಾರದ ಬಗ್ಗೆಯಾಗಲಿ ಮಾತನಾಡುವುದಿಲ್ಲ. ಆದರೆ, ಕೇಂದ್ರ ಸರ್ಕಾರ ಮಾಡುವ ಕಾರ್ಯಕ್ರಮದ ಬಗ್ಗೆ ಟೀಕೆ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದರು.
ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅದು ರೈತರಾಗಿರಬಹುದು, ಯುವಶಕ್ತಿಯಾಗಿರಬಹುದು ಎಲ್ಲರೂ ಆಕ್ರೋಶ ಭರಿತರಾಗಿದ್ದಾರೆ ಎಂದು ಹೇಳಿದರು.
ಬಿಜೆಪಿ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಸಂಘಟಿತವಾಗಿ ಎದುರಿಸಲಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲೇ ಚುನಾವಣೆಯನ್ನು ಎದುರಿಸಲಾಗುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದು ನಿಶ್ಚಿತ ಎಂದು ತಿಳಿಸಿದರು.
ಸಂಧಾನ ಯಶಸ್ವಿ:
ಇದುವರೆಗೂ ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ ನಡುವೆ ನಡೆದಿದ್ದ ಮುಸುಕಿನ ಗುದ್ದಾಟ ಅಂತ್ಯ ಕಂಡಿದೆ. ಅಮಿತ್ ಶಾ ಅವರ ಸಂಧಾನ ಯಶಸ್ವಿಯಾಗಿದೆ.
ಇಬ್ಬರು ನಾಯಕರ ಕೈಗಳನ್ನು ಎತ್ತಿಹಿಡಿದ ಅಮಿತ್ ಶಾ ಒಗ್ಗಟ್ಟಿನ ಮಂತ್ರವನ್ನು ಜಪಿಸಿದರು. ಈ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಇದುವರೆಗಿನ ಅಸಮಾಧಾನಗಳು ಮುಗಿದಿವೆ. ಇದೆಲ್ಲಾ ಮುಗಿದ ಅಧ್ಯಾಯ ಎಂದು ಹೇಳುವ ಮೂಲಕ ಇಬ್ಬರ ಕೈಗಳನ್ನು ಮೇಲೆತ್ತಿ ಸಾರಿದರು.