
ಶ್ರೀನಗರ:ಮಾ-25: ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಮೊಹಮ್ಮದ್ ಅಶ್ರಫ್ ಸೆಹರಾಯ್ ಅವರ ಪುತ್ರ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾನೆ.
26 ವರ್ಷದ ಜುನೈದ್ ಅಶ್ರಫ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದು, ಈತ ಕಾಶ್ಮೀರ ವಿಶ್ವವಿದ್ಯಾಲಯದಿಂದ MBA ಪದವಿ ಪಡೆದಿದ್ದ. ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಈತನಿಗೆ ಅಮರ್ ಭಾಯ್ ಎಂಬ ಕೋಡ್ ನೇಮ್ ನೀಡಿದೆ. ಎಕೆ 47 ರೈಫಲ್ ಹಿಡಿದಿರುವ ಅವನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜುನೈದ್ ಅಶ್ರಫ್ ಕಾಣೆಯಾಗಿದ್ದಾನೆ ಎಂದು ಆತನ ತಂದೆ ಶುಕ್ರವಾರ ದೂರು ದಾಖಲಿಸಿದ್ದರು. ಅದರ ಮಾರನೇ ದಿನವೇ ಆತ ಉಗ್ರ ಸಂಘಟನೆಗೆ ಸೇರಿರುವ ಸುದ್ದಿ ಬಹಿರಂಗಗೊಂಡಿದೆ.
ಜುನೈದ್ ಅಶ್ರಫ್ನ ತಂದೆ ಮೊಹಮ್ಮದ್ ಅಶ್ರಫ್ ಸೆಹರಾಯ್ ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆ ತೆಹ್ರಿಕ್ ಇ ಹುರಿಯುತ್ ಪಕ್ಷದ ಅಧ್ಯಕ್ಷರಾಗಿ ಮಾರ್ಚ್ 19 ರಂದು ಅಧಿಕಾರ ಸ್ವೀಕರಿಸಿದ್ದರು.