![Rambhapoori](http://kannada.vartamitra.com/wp-content/uploads/2018/03/Rambhapoori-319x381.jpg)
ವಿಜಯಪುರ, ಮಾ.25- ವೀರಶೈವ-ಲಿಂಗಾಯಿತ ಎರಡೂ ಒಂದೇ. ಬೇರೆ ಬೇರೆ ಅಲ್ಲ ಎಂದು ರಂಬಾಪುರಿ ಶ್ರೀಗಳು ತಿಳಿಸಿದ್ದಾರೆ.
ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿರುವ ವೀರಶೈವ-ಲಿಂಗಾಯಿತ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ವೀರಶೈವ ಧರ್ಮದಲ್ಲಿರುವ ಸಮಗ್ರತೆಯನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
ಕೆಲವು ರಾಜಕಾರಣಿಗಳು ಸಚಿವ ಸಂಪುಟದಲ್ಲಿ ಮಾತನಾಡಿ ಧರ್ಮಕ್ಕೆ ಧಕ್ಕೆ ಉಂಟುಮಾಡಲು ಹೊರಟಿದ್ದಾರೆ. ಬಸವಾದಿ ಶಿವಶರಣರು, ಪಂಚಪೀಠಾಧಿಪತಿಗಳು, ರೇಣುಕಾಚಾರ್ಯ ಕೊಟ್ಟ ದಿವ್ಯ ಸಂದೇಶವನ್ನು ನಾಡಿನ ಜನಕ್ಕೆ ನಾವು ಇಲ್ಲಿ ಮತ್ತೊಮ್ಮೆ ಸಾರಲಿದ್ದೇವೆ ಎಂದು ತಿಳಿಸಿದರು.
ಧರ್ಮದ ವ್ಯವಸ್ಥೆಯನ್ನು ಕೆಡಿಸುವ ರಾಜಕಾರಣಿಗಳಿಗೆ ಜನತೆ ತಕ್ಕಸಾಸ್ತಿ ಮಾಡಿಲಿದ್ದಾರೆ. ಯಾರಾದರು ನ್ಯಾಯಾಲಯಕ್ಕಾದರೂ ಹೋಗಲಿ, ಎಲ್ಲಿಗಾದರೂ ಹೋಗಲಿ ವೀರಶೈವ ಸಮಗ್ರತೆಗೆ ಧಕ್ಕೆ ಉಂಟಾಗಲು ಬಿಡುವುದಿಲ್ಲ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಸಾವಿರಾರು ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ರಂಬಾಪುರ ಕಾಶಿ ಶ್ರೀಶೈಲ ಜಗದ್ಗುರುಗಳು, ಜಾಲಹಳ್ಳಿ ಮಠಾಧೀಶರು, ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.