ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಪ್ರತ್ಯೇಕವಾದ ವೃಂದ ಮತ್ತು ನೇಮಕಾತಿ ನಿಯಮಗಳು ರಚನೆಯಾಗಬೇಕು: ಈಶಾನ್ಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾ.ರಾ.ಪ್ರತಾಪ್ ರೆಡ್ಡಿ ಒತ್ತಾಯ

ಬಳ್ಳಾರಿ,ಮಾ.25- ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಪ್ರತ್ಯೇಕವಾದ ವೃಂದ ಮತ್ತು ನೇಮಕಾತಿ ನಿಯಮಗಳು ರಚನೆಯಾಗಬೇಕು ಎಂದು ಈಶಾನ್ಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾ.ರಾ.ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೆಚ್ಚು ಅನುಭವವಿರುವ ಹಿರಿಯ ಸಚಿವರು, ಚುನಾಯಿತ ಪ್ರತಿನಿಧಿಗಳು, ಸಾಹಿತಿಗಳು ಹಾಗೂ ಪತ್ರಕರ್ತರನ್ನೊಳಗೊಂಡ ಅನುಷ್ಠಾನ ಸಮಿತಿಯನ್ನು ರಚಿಸಿ ಆ ಸಮಿತಿಗೆ ಪರಮಾಧಿಕಾರವನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಿಗೆ ವಾರ್ಷಿಕ 1500 ಕೋಟಿ ರೂ. ಅನುದಾನ ನೀಡುವುದಾಗಿ ಸರ್ಕಾರ ಆಶ್ವಾಸನೇ ನೀಡಿದ್ದರೂ 500 ಕೋಟಿಗಿಂತ ಹೆಚ್ಚು ಅನುದಾನ ಒದಗಿಸಿಲ್ಲ.
ಐದು ವರ್ಷದಲ್ಲಿ ಏಳೂವರೆ ಸಾವಿರ ಕೋಟಿ ಅನುದಾನದ ಬದಲಿಗೆ ಕೇವಲ ಎರಡೂವರೆ ಸಾವಿರ ಕೋಟಿ ಅನುದಾನ ಮಾತ್ರ ನೀಡಲಾಗಿದೆ. ಸರ್ಕಾರಕ್ಕೂ ಈ ಭಾಗದ ಅಭಿವೃದ್ದಿಯ ಆಸಕ್ತಿ ಇಲ್ಲ. ಜನಪ್ರತಿನಿಧಿಗಳಿಗೂ ಬೇಕಾಗಿಲ್ಲ ಎಂಬಂತಾಗಿದೆ ಎಂದು ಟೀಕಿಸಿದರು.
ಎಚ್‍ಕೆಡಿಬಿ ಅನುದಾನದಲ್ಲಿ 500 ಕೋಟಿ ರೂ.ಗಳನ್ನು ಆರು ಜಿಲ್ಲೆಯ ಗ್ರಾಮೀಣಾ ಭಾಗದ ಶಾಲಾ ಕಾಲೇಜುಗಳಿಗೆ ನೀಡಿದಾಗ ಮಾತ್ರ ಮೂಲ ಸೌಕರ್ಯ ಕಲ್ಪಿಸಲು ಅನುಕೂಲವಾಗಲಿದೆ.
ವಿದ್ಯಾರ್ಥಿಗಳಿಂದ ಪಡೆಯುವ ಟ್ಯೂಶನ್ ಶುಲ್ಕದ ಶೇ.50ರಷ್ಟನ್ನು ಆಡಳಿತ ಮಂಡಳಿಗೆ ನೀಡಬೇಕು, ಬೆಂಗಳೂರಿನಲ್ಲಿರುವಂತೆ ಕಲ್ಬುರ್ಗಿಯಲ್ಲೂ ಕೆಇಟಿ ಶಾಖೆಯನ್ನು ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.
ಸ್ವಾತಂತ್ರ್ಯ ಬಂದಾಗಿನಿಂದಲೂ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಬಳ್ಳಾರಿಯಿಂದ ಅಭ್ಯರ್ಥಿ ಸ್ಪರ್ಧಿಸಿರಲಿಲ್ಲ. ಜಿಲ್ಲೆಗಳ ಸಂಘಸಂಸ್ಥೆಗಳ ಒತ್ತಾಯದ ಮೇರೆಗೆ ಜೆಡಿಎಸ್‍ನಿಂದ ಸ್ಪರ್ಧಿಸಿದ್ದು , ಈ ಬಾರಿ 20 ಸಾವಿರಕ್ಕೂ ಪದವೀಧರರು ನೋಂದಣಿಯಾಗಿರುವುದು ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಇಲ್ಲಿಯವರೆಗೆ ಸುಮಾರು 28 ಸಾವಿರ ಪದವೀಧರರು ನೋಂದಾಣಿ ಮಾಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ