ನವದೆಹಲಿ,ಮಾ.25- ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಮತ್ತು ಕೃಷಿಕರು ಮಹತ್ತರ ಪಾತ್ರ ವಹಿಸುತ್ತಾರೆ ಎಂದು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ರೈತರ ಹಿತಾಸಕ್ತಿ ರಕ್ಷಣೆಗೆ ತಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಪುನರುಚ್ಚಿಸಿದ್ದಾರೆ.
ಬಾನುಲಿ ಕಾರ್ಯಕ್ರಮ ಮನ್ ಕಿ ಬಾತ್ 42ನೇ ಆವೃತ್ತಿಯಲ್ಲಿ ಇಂದು ಮಾತನಾಡಿದ ಅವರು, ರೈತರಿಗೆ ಸೂಕ್ತ ಬೆಂಬಲ ಬೆಲೆ ಒದಗಿಸಲು ಸರ್ಕಾರ ಯೋಜನೆಯನ್ನು ರೂಪಿಸಿದೆ. ಇದೇ ಉದ್ದೇಶಕ್ಕಾಗಿ ಅವರ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಗೊಳಿಸಲಾಗುವುದು ಎಂದು ಹೇಳಿದರು.
ಕೃಷಿ ಮತ್ತು ರೈತರಿಗಾಗಿ ಪ್ರಸಕ್ತ ಬಜೆಟ್ನಲ್ಲಿ ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸಲಾಗಿದೆ. ವ್ಯವಸಾಯ ಮತ್ತು ರೈತರು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ದೇಶದ ಜನರಲ್ಲಿ ಆತ್ಮವಿಶ್ವಾಸ ಮೂಡುತ್ತಿದ್ದು , 2020ರ ವೇಳೆಗೆ ನವಭಾರತ ನಿರ್ಮಾಣ ಕನಸು ನನಸಾಗುವ ಕಾಲ ಸನಿಹಿತವಾಗಿದೆ ಎಂದು ಹೇಳಿದರು.
ತಮ್ಮ ಭಾಷಣದ ಆರಂಭದಲ್ಲಿ ರಾಮನವಮಿ ಪ್ರಯುಕ್ತ ದೇಶವಾಸಿಗಳಿಗೆ ಶುಭಕೋರಿದ ಪ್ರಧಾನಿ, ಶ್ರೀರಾಮನ ಆದರ್ಶ ಇಡೀ ವಿಶ್ವಕ್ಕೆ ಮಾದರಿ ಎಂದು ಬಣ್ಣಿಸಿದರು.
ಎಂದಿನಂತೆ ತಮ್ಮ ಭಾಷಣದಲ್ಲಿ ಭಾರತ ಸ್ವಚ್ಛತಾ ಅಭಿಯಾನದ ಬಗ್ಗೆ ಮಾತನಾಡಿದ ಅವರು, ಸ್ವಚ್ಛತೆ ಮತ್ತು ಸ್ವಾಸ್ಥ್ಯ ಒಂದಕ್ಕೊಂದು ಪೂರಕವಾಗಿದೆ ಎಂದು ವಿಶ್ಲೇಷಿಸಿದರು.
ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯಕರ್ತವ್ಯ. ಈಗ ದೇಶದಲ್ಲಿ ಬೇಸಿಗೆ ಈ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಪೂರೈಸುವ ಮೂಲಕ ಅವುಗಳನ್ನು ರಕ್ಷಿಸಬೇಕು ಎಂದು ನಾಗರಿಕರಿಗೆ ಕರೆ ನೀಡಿದರು.