ಸರ್ಕಾರಿ ಶಾಲೆಯೊಂದರ ಏಕೈಕ ವಿದ್ಯಾರ್ಥಿಗಾಗಿ ಪಾಠ ಮಾಡಲು ಶಿಕ್ಷಕರೊಬ್ಬರು ಪ್ರತಿದಿನ 25 ಕಿ.ಮೀ. ದೂರದಿಂದ (ಅಪ್ ಅಂಡ್ ಡೌನ್ 50 ಕಿ.ಮೀ.ಗಳು) ಬರುತ್ತಾರೆ..!!

ಪುಣೆ, ಮಾ.25-ಮಹಾರಾಷ್ಟ್ರದ ಪುಣೆಯಿಂದ 100 ಕಿಮೀ ದೂರದಲ್ಲಿರುವ ಗ್ರಾಮವೊಂದು ಇದೀಗ ಭಾರೀ ಸುದ್ದಿ ಮಾಡುತ್ತಿದೆ. ಇಲ್ಲಿನ ಸರ್ಕಾರಿ ಶಾಲೆಯೊಂದರ ಏಕೈಕ ವಿದ್ಯಾರ್ಥಿಗಾಗಿ ಪಾಠ ಮಾಡಲು ಶಿಕ್ಷಕರೊಬ್ಬರು ಪ್ರತಿದಿನ 25 ಕಿ.ಮೀ. ದೂರದಿಂದ (ಅಪ್ ಅಂಡ್ ಡೌನ್ 50 ಕಿ.ಮೀ.ಗಳು) ಬರುತ್ತಾರೆ..!!
ಭೋರ್ ತಾಲ್ಲೂಕಿನ ಚಂದರ್ ಎಂಬ ಗ್ರಾಮದ ವಿದ್ಯಾರ್ಥಿಯೊಬ್ಬ ಬಹುಶಃ ಭಾರತದ ಶಾಲೆಯೊಂದರ ಏಕೈಕ ವಿದ್ಯಾರ್ಥಿ. ಈತನ ಹೆಸರು ಯುವರಾಜ್ ಸಂಗಲೆ (8 ವರ್ಷ). ಈತನಿಗೆ ಪಾಠ ಮಾಡಲು ಪ್ರತಿದಿನ(ರಜಾದಿನಗಳನ್ನು ಹೊರತುಪಡಿಸಿ) ರಂಜನೀಕಾಂತ್ ಮೆಂಢೆ (29) 25 ಕಿ.ಮೀ. ದೂರದಿಂದ ಬರುತ್ತಾರೆ.
ಚಂದರ್ ಹೆಸರಿಗಷ್ಟೇ ಚಂದದೂರು. ಇದೊಂದು ಕುಗ್ರಾಮ. ಮೂಲಭೂತ ಸೌಕರ್ಯಗಳಂತೂ ಮರೀಚಿಕೆ. ಇಲ್ಲಿ ಒಟ್ಟು 15 ಗುಡಿಸಲುಗಳಿದ್ದು, ಸುಮಾರು 60 ಜನ ಮಾತ್ರ ವಾಸವಾಗಿದ್ದಾರೆ. ವಾಸ್ತವ ಸಂಗತಿ ಎಂದರೆ ಇಲ್ಲಿ ಮನುಷ್ಯರಿಗಿಂತ ಹಾವು-ಹಾವರಾಣಿಗಳೇ ಹೆಚ್ಚು.
ಇಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಏಕಾಮದ್ವೀತಿಯ ವಿದ್ಯಾರ್ಥಿ ಯುವರಾಜನೇ ವಿದ್ಯಾಸಂಸ್ಥೆಗೆ ರಾಜಕುಮಾರ. ಈತ ಓದುತ್ತಿದ್ದಾನೆ ಎಂಬ ಕಾರಣಕ್ಕಾಗಿ ಶಾಲೆಯನ್ನು ಸರ್ಕಾರ ಮುಚ್ಚಿಲ್ಲ. ಹೀಗಾಗಿ ಕಳೆದ ಎಂಟು ವರ್ಷಗಳಿಂದ ಶಿಕ್ಷಕ ರಂಜನೀಕಾಂತ್ ತಮ್ಮ ದ್ವಿಚಕ್ರ ವಾಹನದಲ್ಲಿ ಇಲ್ಲಿಗೆ ಬಂದು ಹೋಗುತ್ತಾರೆ. ಗುರು-ಶಿಷ್ಯರ ಹೆಸರು ಅದೆಷ್ಟು ಚೆಂದವಿದೆ ನೋಡಿ. ಯುವರಾಜನಿಗೆ ರಜನಿಕಾಂತ್ ಪಾಠ ಮಾಡುವ ಮೇಷ್ಟ್ರು.
ಇಲ್ಲಿಗೆ ಹೋಗುವ ದಾರಿಯಂತೂ ದೇವರಿಗೇ ಪ್ರೀತಿ.. 12 ಕಿ.ಮೀ.ಮಾರ್ಗವಂತೂ ಕಲ್ಲು ಮಣ್ಣುಗಳ ಹಾದಿ. ಹಳ್ಳ ಕೊಳ್ಳದ ಅಪಾಯಕರ ದಾರಿಯಲ್ಲಿ ಮೈಕೆ ನೋಯಿಸಿಕೊಂಡು ಶಿಕ್ಷಕರು ಇಲ್ಲಿಗೆ ಬರುತ್ತಾರೆ. ಈ ಶಾಲೆಯ ಏಕಾಂಗಿ ವಿದ್ಯಾರ್ಥಿ ಬಲು ಫಟಿಂಗ. ಈ ಫಟಿಂಗನ ಪಳಗಿಸಲು, ವಿದ್ಯೆ ಧಾರೆ ಎರೆಯಲು ಸವಾಲುಗಳ ಜತೆಗೆ ದೂರದ ಊರಿನಿಂದ ದುರ್ಗಮ ಹಾದಿ ಸವೆಸಬೇಕಿದೆ. ನಿಜಕ್ಕೂ ಈ ಮಾಸ್ತರು ಇತರರಿಗೆ ಮಾದರಿ ಎಂದರೆ ತಪ್ಪಾಗಲಾರದು.
ಶಿಕ್ಷಕರು ಗ್ರಾಮಕ್ಕೆ ಬಂದಾಗ ಅವರು ಮಾಡುವ ಮೊದಲ ಕೆಲಸ ಯುವರಾಜನನ್ನು ಹುಡುಕುವುದು. ಶಾಲೆಗೆ ಬರಲು ಸತಾಯಿಸುವ ಈತ ಮರದ ಮೇಲೋ, ಪೆÇದೆಗಳ ಹಿಂದೆಯೋ ಅಥವಾ ತನ್ನ ಗುಡಿಸಲಿನಲ್ಲಿ ಬಚ್ಚಿಟ್ಟುಕೊಂಡಿರುತ್ತಾನೆ. ಆತನನ್ನು ಹುಡುಕಿ ಶಾಲೆಗೆ ಕರೆತರುವುದು ರಂಜನೀಕಾಂತ್‍ಗೆ ಪ್ರತಿದಿನ ದೊಡ್ಡ ತಲೆನೋವು. ಆದರೂ ಈ ಯುವ ಶಿಕ್ಷಕ ಶ್ರದ್ಧೆಯಿಂದ ಆತನಿಗೆ ಪಾಠ ಹೇಳಿಕೊಡುತ್ತಿದ್ದಾರೆ.
ಇವರು ಎಂಟು ವರ್ಷಗಳ ಹಿಂದೆ ಇಲ್ಲಿಗೆ ಬಂದಾಗ 11 ಜನ ವಿದ್ಯಾರ್ಥಿಗಳಿದ್ದರು. ಕೆಲವರು ದೂರದ ಗ್ರಾಮಗಳಿಂದ ಬರುತ್ತಿದ್ದರು. ಇದೇ ಕಾರಣಕ್ಕಾಗಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಈಗ 1ಕ್ಕೆ ಬಂದು ನಿಂತಿದೆ.
ಏಕೈಕ ಯುವರಾಜನಿಗೆ ನಿಸ್ವಾರ್ಥವಾಗಿ ವಿದ್ಯಾಧಾರೆ ಎರೆಯುತ್ತಿರುವ ರಂಜನೀಕಾಂತ್ ಇತರ ಆದರ್ಶ ಶಿಕ್ಷಕರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ