ವಿಧಾನಸಭೆ ಚುನಾವಣೆ: ಮೇಯರ್ ಸಂಪತ್‍ರಾಜ್ ಅವರನ್ನು ಸಿ.ವಿ.ರಾಮನ್ ನಗರದಿಂದ ಕಾಂಗ್ರೆಸ್ ಕಣಕ್ಕಿಳಿಸುವ ಚಿಂತನೆ

ಬೆಂಗಳೂರು, ಮಾ.24-ಸರ್ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಮೇಯರ್ ಸಂಪತ್‍ರಾಜ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುವ ಚಿಂತನೆ ನಡೆಸಿದೆ. ಈ ಮೂಲಕ ಮೇಯರ್ ಒಬ್ಬರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ದಾಖಲೆ ಬರೆಯುವ ಸಾಧ್ಯತೆ ಇದೆ.

ಸರ್.ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದಿಂದ ಟಿ.ನರಸೀಪುರ ಕ್ಷೇತ್ರದ ಪ್ರತಿನಿಧಿಯಾಗಿದ್ದ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಮಹದೇವಪ್ಪ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮೇಯರ್ ಸಂಪತ್‍ರಾಜ್ ಅವರನ್ನು ಕಣಕ್ಕಿಳಿಸಲು ಗ್ರೀನ್‍ಸಿಗ್ನಲ್ ನೀಡಿದೆ ಎನ್ನಲಾಗಿದೆ.

ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಡಿ.ಜೆ.ಹಳ್ಳಿ ವಾರ್ಡ್ ಸದಸ್ಯರಾಗಿರುವ ಮೇಯರ್ ಸಂಪತ್‍ರಾಜ್ ಅವರು ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಆ ಕ್ಷೇತ್ರದ ಶಾಸಕರಾಗಿರುವ ಅಖಂಡ ಶ್ರೀನಿವಾಸಮೂರ್ತಿ ಅವರು ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದ ಅಲ್ಲಿ ಅವರಿಗೆ ಟಿಕೆಟ್ ನೀಡುವುದು ಖಚಿತವಾಗಿದೆ. ಹೀಗಾಗಿ ಆ ಕ್ಷೇತ್ರದ ಆಕಾಂಕ್ಷಿಯಾಗಿರುವ ಮೇಯರ್ ಸಂಪತ್‍ರಾಜ್ ಅವರಿಗೆ ಸಿ.ವಿ.ರಾಮನ್‍ನಗರದಿಂದ ಸ್ಪರ್ಧಿಸಲು ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ ಎನ್ನಲಾಗಿದ್ದು, ಇವರಿಗೆ ಟಿಕೆಟ್ ಬಹುತೇಕ ಖಚಿತ ಎಂದು ತಿಳಿದುಬಂದಿದೆ.

ಆದರೆ ಕಳೆದ ಬಾರಿ ಈ ಕ್ಷೇತ್ರದಿಂದ ಪರಾಜಿತರಾಗಿದ್ದ ಕಾಂಗ್ರೆಸ್‍ನ ಪ್ರಭಾವಿ ನಾಯಕ ಪ್ರಸನ್ನಕುಮಾರ್ ಅವರಿಗೆ ವಿಧಾನಪರಿಷತ್‍ಗೆ ಅವಕಾಶ ಕಲ್ಪಿಸುವುದಾಗಿ ಹೈಕಮಾಂಡ್ ಮನವೊಲಿಸಿದೆ ಎನ್ನಲಾಗಿದೆ. ಸರ್.ಸಿ.ವಿ.ರಾಮನ್‍ನಗರ ಕ್ಷೇತ್ರದಲ್ಲಿ ಕಳೆದ ಬಾರಿ ಸ್ಪರ್ಧಿಸಿ ಪರಾಭವಗೊಂಡು ಆ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದ ಪಿ.ರಮೇಶ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಇಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ವಿಚಾರ ಕೇಳಿ ಬಂದಾಗ ಇವರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು, ಹೈಕಮಾಂಡ್‍ನ ಕೆಂಗಣ್ಣಿಗೆ ಗುರಿಯಾಗಿದ್ದರು. ಇವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಒಲವು ಇಲ್ಲದಿರುವುದು ಕಂಡು ಬಂದಿದೆ. ಹಾಗಾಗಿ ಸಂಪತ್‍ರಾಜ್ ಹಾದಿ ಸುಗಮವಾಗಿದೆ.

ಸಂಪತ್‍ರಾಜ್ ಅವರಿಗೆ ಟಿಕೆಟ್ ದೊರೆತರೆ ಹಾಲಿ ಮೇಯರ್‍ರೊಬ್ಬರು ಹುದ್ದೆಯಲ್ಲಿರುವಾಗಲೇ ಚುನಾವಣೆಗೆ ನಿಲ್ಲುವ ಪ್ರಥಮ ಮೇಯರ್ ಆಗಲಿದ್ದಾರೆ. ಈಗಾಗಲೇ ಕೆ.ಚಂದ್ರಶೇಖರ್ ಸೇರಿದಂತೆ ಹಲವರು ಮಾಜಿ ಮೇಯರ್‍ಗಳಾಗಿ ಚುನಾವಣೆ ಎದುರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ