ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ 25 ಕೋಟಿ ಕಿಕ್‍ಬ್ಯಾಕ್ ಆರೋಪ: ಸಚಿವ ಎಂ.ಬಿ.ಪಾಟೀಲ್ ಹಾಗೂ ಹಿರಿಯ ಅಧಿಕಾರಿಗಳ ವಿರುದ್ಧ ಬಿಜೆಪಿ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು

 

ಬೆಂಗಳೂರು, ಮಾ.24- ವಿಶ್ವೇಶ್ವರಯ್ಯ ಜಲನಿಗಮದ 158 ಕೋಟಿ ರೂ. ಮೊತ್ತದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ 25 ಕೋಟಿ ಕಿಕ್‍ಬ್ಯಾಕ್ ಪಡೆದಿರುವ ಆರೋಪದ ಮೇಲೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮತ್ತು ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಬಿಜೆಪಿ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಿದೆ.

ಸಚಿವ ಎಂ.ಬಿ.ಪಾಟೀಲ್ ಮತ್ತು ನಿಗಮದ ಅಧಿಕಾರಿಗಳಾದ ಚಲುವರಾಜು ಮತ್ತು ಕೃಷ್ಣಮೂರ್ತಿ ಎಂಬುವವರು 25 ಕೋಟಿ ಕಿಕ್‍ಬ್ಯಾಕ್ ಪಡೆದ ಆರೋಪಕ್ಕೆ ಗುರಿಯಾಗಿದ್ದು, ಆರೋಪಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಎಸಿಬಿಗೆ ದೂರು ಸಲ್ಲಿಸಿದ್ದಾರೆ.

ಏನಿದು ಆರೋಪ..? ನಿಗಮದ ವತಿಯಿಂದ ಚಿತ್ರದುರ್ಗ ಶಾಖಾ ನಾಲೆಯ 2.9ಕಿಲೋ ಮೀಟರ್ ನಾಲೆ ನಿರ್ಮಾಣ ಕಾಮಗಾರಿಗೆ ಕರೆಯಲಾಗಿದ್ದ ಟೆಂಡರ್‍ನಲ್ಲಿ ಕೇವಲ ಎರಡು ಗುತ್ತಿಗೆ ಸಂಸ್ಥೆಗಳು ಮಾತ್ರ ಭಾಗವಹಿಸಲು ಅವಕಾಶ ಒದಗಿಸಲಾಗಿರುತ್ತದೆ. ಇದರಲ್ಲಿ ನ್ಯಾಷನಲ್ ಪ್ರಾಜೆಕ್ಟ್ ಕನ್‍ಸ್ಟ್ರಕ್ಷನ್ ಕಾಪೆರ್Çರೇಷನ್ ಸಂಸ್ಥೆಗೆ 150 ಕೋಟಿ ರೂ.ಗಳ ಕಾಮಗಾರಿಯ ಕಾರ್ಯಾದೇಶ ನೀಡಲಾಗಿದೆ.

ಆದರೆ, ಟೆಂಡರ್‍ನಲ್ಲಿ ಪಾಲ್ಗೊಂಡಿದ್ದ ನ್ಯಾಷನಲ್ ಹಾಗೂ ಅಮ್ಮಾ ಸಂಸ್ಥೆಯವರು ಸಲ್ಲಿಸಿದ್ದ ವರ್ಕ್ ಡನ್ ಸರ್ಟಿಫಿಕೆಟ್ ನಕಲಿಯಾಗಿದ್ದು, ಈ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ನಿಗಮದ ಅಧಿಕಾರಿಗಳೇ ಎಂದು ರಮೇಶ್ ದೂರಿನಲ್ಲಿ ಆರೋಪಿಸಿದ್ದಾರೆ.

158 ಕೋಟಿ ರೂ.ಗಳ ಕಾಮಗಾರಿ ನೀಡಲು ನ್ಯಾಷನಲ್ ಪ್ರಾಜೆಕ್ಟ್ ಸಂಸ್ಥೆಯಿಂದ 25 ಕೋಟಿ ಕಿಕ್‍ಬ್ಯಾಕ್ ಪಡೆಯಲಾಗಿದೆ. ಈ ಲಂಚ ಪ್ರಕರಣದಲ್ಲಿ ನಿಗಮದ ಅಧಿಕಾರಿಗಳಾದ ಚಲುವರಾಜು ಮತ್ತು ಕೃಷ್ಣಮೂರ್ತಿ ಎಂಬುವವರು ಶಾಮೀಲಾಗಿದ್ದು, ಇವರು ಸಚಿವ ಎಂ.ಬಿ.ಪಾಟೀಲ್ ಆಣತಿಯಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಕೇವಲ 158 ಕೋಟಿ ವೆಚ್ಚದ ಕಾಮಗಾರಿಯಲ್ಲಿ 25 ಕೋಟಿ ರೂ.ಗಳ ಕಿಕ್‍ಬ್ಯಾಕ್ ಆರೋಪ ಕೇಳಿಬಂದಿರುವುದರಿಂದ ನಿಗಮದ ವತಿಯಿಂದ ಸುಮಾರು 5 ಸಾವಿರ ಕೋಟಿ ರೂ.ಗಳ ಕಾಮಗಾರಿ ನಡೆಸಲಾಗುತ್ತಿದ್ದು, ಈ ಎಲ್ಲ ಕಾಮಗಾರಿಯಲ್ಲಿ ನೂರಾರು ಕೋಟಿ ರೂ.ಗಳ ಅವ್ಯವಹಾರ ನಡೆದಿರುವ ಸಾಧ್ಯತೆ ಇರುವುದರಿಂದ ಇಡೀ ಪ್ರಕರಣದ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ