ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಶಿಫಾರಸು: ಸಿಎಂ ಗೆ ಮಾತೆ ಮಹಾದೇವಿ ಅಭಿನಂದನೆ

 

ಬೆಂಗಳೂರು, ಮಾ.24- ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಿ ಕೇಂದ್ರಕ್ಕೆ ಶಿಫಾರಸು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಗದ್ಗುರು ಮಾತೆ ಮಹಾದೇವಿ ಅಭಿನಂದಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 19ರಂದು ನಡೆದ ಸಚಿವ ಸಂಪುಟದಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ವಿರೋಧಿಸಿದ್ದ ಕೆಲ ಸಚಿವರ ಮನವೊಲಿಸಿ ಸಿದ್ದರಾಮಯ್ಯ ಅವರು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಲು ಮುಂದಾಗಿದ್ದಾರೆ.

ಅಲ್ಲದೆ, ಅವರನ್ನು ಧಾರ್ಮಿಕ ಅಲ್ಪ ಸಂಖ್ಯಾತರೆಂದು ಗುರುತಿಸಲು ಅಲ್ಪ ಸಂಖ್ಯಾತರ ಆಯೋಗಕ್ಕೆ ಕಳುಹಿಸಿದ್ದಾರೆ. ಲಿಂಗಾಯತರು ಮತ್ತು ವೀರಶೈವ ಲಿಂಗಾಯತ, ಬಸವತತ್ವದಲ್ಲಿ ನಂಬಿಕೆ ಉಳ್ಳವರು ಎಂಬ ಹೆಸರಿನಲ್ಲಿ ಲಿಂಗಾಯತರಿಗೆ ಧಾರ್ಮಿಕ ಅಲ್ಪ ಸಂಖ್ಯಾತರ ಸ್ಥಾನಮಾನದ ಶಿಫಾರಸಿಗೆ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡಿದ್ದಾರೆ. ಮಾ.23ರಂದು ಅಲ್ಪ ಸಂಖ್ಯಾತರ ಆಯೋಗವೂ ಸಹ ಇದಕ್ಕೆ ಮಾನ್ಯತೆ ನೀಡಿದೆ ಎಂದು ತಿಳಿಸಿದರು.

ಮುಂದಿನ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಕೇಂದ್ರ ಸಚಿವರಾದ ಅನಂತ್‍ಕುಮಾರ್ ಮತ್ತಿತರರು ಲಿಂಗಾಯತ ಧರ್ಮದ ಪ್ರತ್ಯೇಕತೆಗೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ. ಕರ್ನಾಟಕದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಈಶ್ವರ ಖಂಡ್ರೆ ಅವರು ಮಾಡಿದ ಕೆಲಸವನ್ನೇ ಅನಂತ್‍ಕುಮಾರ್ ಅಂತಹವರು ಮಾಡಬಹುದು. ಆದರೆ, ವಿಚಾರವಾದಿಗಳು, ಹಿಂದುಳಿದ ವರ್ಗದವರು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಲೋಕಸಭೆಯಲ್ಲಿ ಮಂಡಿಸಲ್ಪಟ್ಟರೆ ಖಂಡಿತವಾಗಿ ಬೆಂಬಲಿಸುವರೆಂಬ ವಿಶ್ವಾಸ ನಮಗಿದೆ ಎಂದು ಮಾತೆ ಮಹಾದೇವಿ ತಿಳಿಸಿದರು.

ನಾಳೆ 73ನೆ ವರ್ಧಂತಿ ಸಮಾರಂಭ: ನಾಳೆ ಬೆಳಗ್ಗೆ 10.30ಕ್ಕೆ ಮಾತೆ ಮಹಾದೇವಿ ಅವರ 73ನೆ ವರ್ಧಂತಿ ಸಮಾರಂಭವನ್ನು ನಗರದ ಪುರಭವನದಲ್ಲಿ ಏರ್ಪಡಿಸಲಾಗಿದೆ.
ವಿಚಾರವಾದಿಗಳಾದ ಚಂದ್ರಶೇಖರ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಪಾಲ್ಗೊಳ್ಳುವರು. ಬೆಂಗಳೂರು ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಬಿ.ಕೆ.ರವಿ ಧ್ವಜಾರೋಹಣ ಮಾಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ