ಬೆಂಗಳೂರು,ಮಾ.24-ಲಿಂಗಾಯಿತರು, ವೀರಶೈವರು ಹಿಂದಿನಿಂದಲೂ ಬೇರೆ ಬೇರೆಯಾಗಿಯೇ ಇದ್ದಾರೆ. ಈಗ ಅವರನ್ನು ಒಡೆಯುವ ಪ್ರಶ್ನೆ ಎಲ್ಲಿಂದ ಬರುತ್ತದೆ ಎಂದು ಜಾಗತಿಕ ಲಿಂಗಾಯಿತ ಮಹಸಭಾದ ಪ್ರಧಾನ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮ್ದಾರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಲಿಂಗಾಯಿತ ಮುಖಂಡರು ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ನಿನ್ನೆ ವೀರಶೈವ ಮಹಾಸಭಾದವರು ಸಭೆ ನಡೆಸಿ ಆರು ನಿರ್ಣಯಗಳನ್ನು ಕೈಗೊಂಡಿದ್ದಾರೆ. ಅವುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಲಿಂಗಾಯಿತರನ್ನು ಒಡೆದರು ಎಂದು ವೀರಶೈವ ಮಹಾಸಭಾದ ಮುಖಂಡರು ಹೇಳಿದ್ದಾರೆ. ಎಂದಿಗೂ ವೀರಶೈವರು, ಲಿಂಗಾಯಿತರು ಒಂದಾಗದೇ ಇರುವಾಗ ಒಡೆಯುವುದು ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.
ವೀರಶೈವ ಮಹಾಸಭಾದವರು ಮೊದಲು ಬಸವಣ್ಣನವರನ್ನು ಒಪ್ಪಿಕೊಳ್ಳಲಿ, ಆ ನಂತರ ತಮ್ಮ ನಿರ್ಣಯಗಳನ್ನು ನೀಡಲಿ ಎಂದು ಸಲಹೆ ನೀಡಿದರು.
ಹಿಂದೂ ಧರ್ಮದಿಂದ ವೀರೈಶವರನ್ನು ಬೇರೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವೀರಶೈವ ಮಹಾಸಭಾದವರು ಪ್ರತ್ಯೇಕ ಧರ್ಮ ಮಾಡಿ ಎಂದು ಕೇಳಿದ್ದಾರೆ.ಇದಕ್ಕೆ ದಾಖಲೆ ಕೊಡಿ ಎಂದಿದ್ದಾರೆ. 1970ರಿಂದಲೂ ಜಾತಿ ಗಣತಿ ಮಾಡಿದಾಗ ವೀರಶೈವ ಮಹಾಸಭಾ ಪ್ರತ್ಯೇಕ ಕೋಡ್ ಕೊಡಿ ಎಂದು ಮನವಿ ಮಾಡುತ್ತಾ ಬಂದಿದೆ.
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸುಶೀಲ್ ಕುಮಾರ್ ಶಿಂಧೆ ಗೃಹಸಚಿವರಾಗಿದ್ದರು. ಅವರು ಈ ಮನವಿಯನ್ನು ತಿರಸ್ಕರಿಸಿದ್ದರು ಎಂದು ಹೇಳಿದರು.
ವೀರಶೈವ ಮಹಾಸಭಾ ಲಿಂಗಾಯಿತರ ಸಂಸ್ಥೆ ಅಲ್ಲ. ಲಿಂಗಾಯಿತರ ಪ್ರಾತಿನಿಧಿಕ ಸಂಸ್ಥೆಯೂ ಅಲ್ಲ ಎಂದು ಹೇಳಿದರು.
ಲಿಂಗಾಯಿತ ಧರ್ಮ 36 ಅಂಶಗಳ ಆಧಾರದ ಮೇಲೆ ನಿಂತಿದೆ. ಹಿಂದೂ ಧರ್ಮಕ್ಕಿಂತಲೂ ವಿಭಿನ್ನವಾಗಿದೆ. 36 ಅಂಶಗಳನ್ನು ನಾಗಮೋಹನ್ ದಾಸ್ ಅವರ ಸಮಿತಿಗೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ವೀರಶೈವರು ಕಾಲಕಾಲಕ್ಕೆ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾರೆ. ಬೇಡ, ಜಂಗಮ ಸಂಘಟನೆಯನು ಹುಟ್ಟು ಹಾಕಿ ಅವರಿಗೆ ಸರ್ಕಾರಿ ಸವಲತ್ತು ನೀಡಬೇಕೆಂದು ಒತ್ತಾಯಿಸಿ ನೋಂದಣಿಯನ್ನು ಮಾಡಿಸಿದ್ದಾರೆ. ಇದಕ್ಕೆ 5 ಜನ ಪಂಚಾಚಾರ್ಯರು ಸಹಿ ಮಾಡಿದ್ದಾರೆ. ಕೊಳದ ಮಠದ ಸ್ವಾಮೀಜಿಯೂ ಇದರಲ್ಲಿ ಪ್ರಮುಖರು ಎಂದು ಹೇಳಿದರು.
ಸಭೆಯಲ್ಲಿ ಲಿಂಗಾಯಿತ ಧರ್ಮ ಪ್ರತಿಪಾದಿಸುವ ಹರ ಗುರು ಚರಮೂರ್ತಿಗಳು ಪಾಲ್ಗೊಂಡಿದ್ದರು.