ರಾಂಚಿ:ಮಾ-24: ಮೇವು ಹಗರಣದ 4 ನೇ ಪ್ರಕರಣದಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ, ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಗೆ ಸಿಬಿಐ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಜಾರ್ಖಂಡ್ನ ವಿಶೇಷ ಸಿಬಿಐ ಕೋರ್ಟ್ ಲಾಲೂಗೆ 7 ವರ್ಷ ಜೈಲು ಶಿಕ್ಷೆ ಹಾಗೂ 30 ಲಕ್ಷ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಧುಮ್ಕಾ ಖಜಾನೆಯಿಂದ 1995ರ ಡಿಸೆಂಬರ್ನಿಂದ 1996ರ ಜನವರಿಯೊಳಗೆ 3.13 ಕೋಟಿ ಹಣವನ್ನು ಅಕ್ರಮವಾಗಿ ತೆಗೆದುಕೊಂಡಿರುವ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಈ ತೀರ್ಪು ನೀಡಿದೆ.
ಸಿಬಿಐ ನ್ಯಾಯಾಧೀಶ ಶಿವಪಾಲ್ ಸಿಂಗ್ ಸೋಮವಾರ ಈ ಸಂಬಂಧ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ಮಾಜಿ ಸಿಎಂ ಜಗನ್ನಾಥ ಮಿಶ್ರಾರನ್ನು ನಿರಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ.
ಇದಕ್ಕೂ ಮೊದಲು ಮೇವು ಹಗರಣಕ್ಕೆ ಸಂಬಂಧಿಸಿದಂತೆ ಹೊರಬಿದ್ದ ಮೂರು ಪ್ರಕರಣಗಳಲ್ಲೂ ದೋಷಿ ಎಂದು ಪರಿಗಣಿಸಲಾಗಿದ್ದ ಲಾಲೂ ಯಾದವ್ ಜೈಲು ಶಿಕ್ಷೆಗೆ ಗುರಿಯಾಗಿದ್ದರು. 2013ರಲ್ಲಿ 5 ವರ್ಷ ಜೈಲು ಶಿಕ್ಷೆ, ಕಳೆದ ಡಿಸೆಂಬರ್ ನಲ್ಲಿ ಪ್ರಕಟವಾಗಿದ್ದ 2ನೇ ಪ್ರಕರಣದಲ್ಲೂ ಲಾಲು ದೋಷಿ ಎಂದು ತೀರ್ಪು ನೀಡಲಾಗಿತ್ತು. ಬಳಿಕ ಮೂರನೇ ಪ್ರಕರಣದಲ್ಲೂ ಲಾಲು ತಪ್ಪಿತಸ್ಥರು ಎಂದು ತೀರ್ಪು ನೀಡಲಾಗಿತ್ತು. ಈಗ ನಾಲ್ಕನೇ ಪ್ರಕರಣದಲ್ಲೂ ಲಾಲು ದೋಷಿ ಎಂದು ತೀರ್ಪು ನೀಡಿರುವ ನ್ಯಾಯಾಲಯ 7 ವರ್ಷಗಳ ಜೈಲುಶಿಕ್ಷೆ ಪ್ರಕಟಿಸಿದೆ.
ಈ ನಡುವೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಲಾಲು ಪ್ರಸಾದ್ ಬೆಂಬಲಿಗರು ಮುಂದಾಗಿದ್ದಾರೆ.
fodder scam,lalu prasad yadav,gets 7 years jail