ನವದೆಹಲಿ,ಮಾ.24- ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ನೀವು ನಮ್ಮ ಮೇಲೆ ವಿನಾಕಾರಣ ಆರೋಪ ಮಾಡಿ ಹೊರಹೋಗಿದ್ದು ಸರಿಯಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಪತ್ರ ಬರೆದಿದ್ದಾರೆ.
ಚಂದ್ರಬಾಬು ನಾಯ್ಡು ಎನ್‍ಡಿಎ ತೊರೆದು ಹೊರ ಹೋದ ನಂತರ ಮೊದಲ ಬಾರಿಗೆ ಪತ್ರ ಬರೆದಿರುವ ಅಮಿತ್ ಷಾ, ಬಿಜೆಪಿ ಪಕ್ಷದ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಆಂಧ್ರಪ್ರದೇಶಕ್ಕೆ ನೀಡಿದ ವಾಗ್ದಾನದಂತೆ ಹೆಚ್ಚಿನ ಆರ್ಥಿಕ ನೆರವು ನೀಡಿದೆ. ನಿಮ್ಮ ರಾಜ್ಯಕ್ಕೆ ಕೊಟ್ಟಿರುವ ಹಣವನ್ನೇ ನೀವು ಸರಿಯಾಗಿ ಬಳಸಿಕೊಂಡಿಲ್ಲ. ಆದರೂ ನೀವು ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಕೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಆಂಧ್ರಪ್ರದೇಶಕ್ಕೆ ನೀಡಿರುವ ಆರ್ಥಿಕ ನೆರವಿನ ಇಂಚಿಂಚು ಮಾಹಿತಿ ನೀಡಿದ್ದಾರೆ. ಅನುದಾನವನ್ನೇ ಬಳಸಿಕೊಳ್ಳದಿರುವಾಗ ಹಣವನ್ನು ಹೇಗೆ ಬಿಡುಗಡೆ ಮಾಡಬೇಕಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ನಿಮ್ಮ ರಾಜ್ಯದಲ್ಲಿ ಉಂಟಾಗಿರುವ ವ್ಯತ್ಯಾಸಗಳನ್ನು ಮರೆಮಾಚಲು ನಮ್ಮ ಮೇಲೆ ಆಧಾರರಹಿತ ಆರೋಪ ಮಾಡುತ್ತಿರುವುದು ಸರಿಯೇ ಎಂದು ಷಾ ನಾಯ್ಡು ಅವರನ್ನು ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು ಎಂಬ ಕಾರಣಕ್ಕೆ ನಾವು ನಿಮ್ಮ ಮೇಲೆ ಮುನಿಸಿಕೊಂಡಿಲ್ಲ. ಸಂಸತ್‍ನಲ್ಲಿ ನಿಮ್ಮ ಸಂಸದರಿಗಿರುವ ಅಧಿಕಾರವನ್ನು ಬಳಸಿಕೊಳ್ಳುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು, ಆದರೆ ಆಂಧ್ರಪ್ರದೇಶಕ್ಕೆ ಯಾವುದೇ ರೀತಿಯ ನೆರವು ನೀಡಿಲ್ಲ ಎಂದು ನಮ್ಮನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.