ರಾಜ್ಯಸಭಾ ಸ್ಥಾನಗಳಿಗೆ ಇಂದು ಮಹತ್ವದ ದ್ವೈವಾರ್ಷಿಕ ಚುನಾವಣೆ ನಡೆದಿದ್ದು, ಸಂಜೆ ಪ್ರಕಟವಾಗುವ ಫಲಿತಾಂಶದತ್ತ ಎಲ್ಲರ ಕಣ್ಣು :

ನವದೆಹಲಿ, ಮಾ.23- ಕರ್ನಾಟಕದ ನಾಲ್ಕು, ಉತ್ತರ ಪ್ರದೇಶದ 10 ಸ್ಥಾನಗಳೂ ಸೇರಿದಂತೆ ದೇಶದ ಆರು ರಾಜ್ಯಗಳ 25 ರಾಜ್ಯಸಭಾ ಸ್ಥಾನಗಳಿಗೆ ಇಂದು ಮಹತ್ವದ ದ್ವೈವಾರ್ಷಿಕ ಚುನಾವಣೆ ನಡೆದಿದ್ದು, ಸಂಜೆ ಪ್ರಕಟವಾಗುವ ಫಲಿತಾಂಶದತ್ತ ಎಲ್ಲರ ಕಣ್ಣು ನೆಟ್ಟಿದೆ.
ರಾಜ್ಯಸಭೆಯ ತೆರವಾಗಲಿರುವ 58 ಸ್ಥಾನಗಳಲ್ಲಿ 25 ಸದಸ್ಯರನ್ನು ಆಯ್ಕೆ ಮಾಡಲು ಇಂದು ಬೆಳಗ್ಗೆ 9 ಗಂಟೆಯಿಂದ ಆಯಾ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಶಾಸಕರು ಮತ ಚಲಾಯಿಸಿದ ದೃಶ್ಯ ಸಾಮಾನ್ಯವಾಗಿತ್ತು.
ಮುಂದಿನ ತಿಂಗಳು 58 ರಾಜ್ಯಸಭಾ ಸದಸ್ಯರು ನಿವೃತ್ತರಾಗಲಿದ್ದು, ಆ ಸ್ಥಾನಗಳನ್ನು ಭರ್ತಿ ಮಾಡಲು ಸಂಸತ್ತಿನ ಮೇಲ್ಮನೆಗೆ ಚುನಾವಣೆ ನಡೆಯಿತು.
ಭರ್ತಿ ಮಾಡಬೇಕಾದ 58 ರಾಜ್ಯಸಭಾ ಸ್ಥಾನಗಳಲ್ಲಿ, 10 ರಾಜ್ಯಗಳ 33 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 25 ಸ್ಥಾನಗಳಿಗಾಗಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಜಾರ್ಖಂಡ್, ಛತ್ತೀಸ್‍ಗಢ ಮತ್ತು ತೆಲಂಗಾಣ-ಈ ರಾಜ್ಯಗಳಲ್ಲಿ ಮತದಾನ ನಡೆಯಿತು. ಕೆಲವೆಡೆ ಅಡ್ಡ ಮತದಾನ ನಡೆದ ವರದಿಯಾಗಿದೆ.
ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನವಾಗಿದೆ. ಸಂಜೆ 5ರ ನಂತರ ಮತ ಎಣಿಕೆ ಕಾರ್ಯ ನಡೆಯಲಿದ್ದು, ಕೆಲ ಹೊತ್ತಿನಲ್ಲೇ ಫಲಿತಾಂಶ ಪ್ರಕಟವಾಗಲಿದೆ.
33 ಮಂದಿ ಅವಿರೋಧ ಆಯ್ಕೆ : ಬಿಜೆಪಿಯಿಂದ 21, ಕಾಂಗ್ರೆಸ್-4, ಟಿಡಿಪಿ-2, ಆರ್‍ಜೆಡಿ-3, ವೈಎಸ್‍ಆರ್, ಶಿವಸೇನೆ ಮತ್ತು ಎನ್‍ಸಿಪಿ-ತಲಾ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರವಿಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವ್ಡೇಕರ್ ಸೇರಿದಂತೆ ಏಳು ಕೇಂದ್ರ ಸಚಿವರ ಅವಿರೋಧ ಆಯ್ಕೆಯನ್ನು ಮಾ.15ರಂದು ಘೋಷಿಸಲಾಗಿದೆ.
ಜೇಟ್ಲಿ, ಪ್ರಧಾನ್ ಕಣದಲ್ಲಿ : ಈ ಹಿಂದೆ ಗುಜರಾತ್‍ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಬಾರಿ ಉತ್ತರ ಪ್ರದೇಶದಿಂದ ಕಣಕ್ಕಿಳಿದಿದ್ದಾರೆ.
ರಾಜಸಭೆಯಲ್ಲಿ ಬಿಹಾರವನ್ನು ಪ್ರತಿನಿಧಿಸಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮಧ್ಯಪ್ರದೇಶದಿಂದ ಸ್ಪರ್ಧಿಸಿದ್ದಾರೆ.
ಉ.ಪ್ರ. 8 ಸ್ಥಾನದಲ್ಲಿ ಬಿಜೆಪಿ ಗೆಲುವು ಖಚಿತ : ಉತ್ತರ ಪ್ರದೇಶದ 10 ಸ್ಥಾನಗಳಲ್ಲಿ ಬಿಜೆಪಿ ಎಂಟರಲ್ಲಿ ಗೆಲ್ಲುವುದು ಖಚಿತವಾಗಿದೆ. ಆದರೆ 9ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಕುತೂಹಲ ಕೆರಳಿಸಿದೆ. ಒಂದು ಸ್ಥಾನವನ್ನು ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯಾ ಬಚ್ಚನ್ ಗೆಲ್ಲುವುದು ಬಹುತೇಕ ಖಚಿತವಾಗಿದೆ. 10ನೇ ಸ್ಥಾನಕ್ಕಾಗಿ ಬಿಎಸ್‍ಪಿ ಮತ್ತು ಬಿಜೆಪಿ ನಡುವೆ ಹಣಾಹಣಿ ಇದೆ.
ಉಳಿದಂತೆ ಪಶ್ಚಿಮ ಬಂಗಾಳ 5, ಕರ್ನಾಟಕ 4, ತೆಲಂಗಾಣ 3, ಜಾರ್ಖಂಡ್ 2 ಮತ್ತು ಛತ್ತೀಸ್‍ಗಢದ 1 ಸ್ಥಾನಗಳಿಗೆ ಮತದಾನ ನಡೆದಿದೆ.
ಗುಜರಾತ್‍ನಿಂದ ಸಚಿವರಾದ ಪುರುಷೋತ್ತಮ್ ರೂಪಾಲ ಮತ್ತು ಮನ್ಸುಖ್ ಎಲ್ ಮಾಂಡವಿಯಾ, ರಾಜಸ್ತಾನದಿಂದ ಭೂಪೇಂದರ್ ಯಾದವ್‍ರನ್ನು ರಾಜ್ಯಸಭೆಗೆ ಕಳುಹಿಸಲು ಬಿಜೆಪಿ ಮುಂದಾಗಿದೆ.
ರಾಜ್ಯಸಭೆ ಒಟ್ಟು 245 ಸ್ಥಾನಗಳನ್ನು ಹೊಂದಿದ್ದು, ಯಾವುದೇ ಪಕ್ಷ ಮೇಲ್ಮನೆಯಲ್ಲಿ ಬಹುಮತ ಗಳಿಸಲು ಕನಿಷ್ಠ 126 ಸ್ಥಾನಗಳನ್ನು ಹೊಂದುವ ಅಗತ್ಯವಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತುತ ರಾಜ್ಯಸಭೆಯಲ್ಲಿ 58 ಸದಸ್ಯರ ಬಲ ಗಳಿಸಿದೆ. ಇದು ಕಾಂಗ್ರೆಸ್ ಪಕ್ಷಕ್ಕಿಂತ ನಾಲ್ಕು ಹೆಚ್ಚುವರಿ ಸ್ಥಾನಗಳನ್ನು ಹೊಂದಿದೆ. ಆಡಳಿತ ಪಕ್ಷವು ಈ ಚುನಾವಣೆಯಲ್ಲಿ ತನ್ನ ಸಂಖ್ಯಾಬಲವನ್ನು ಮತ್ತಷ್ಟು ವೃದ್ದಿಸಿಕೊಳ್ಳುವ ತವಕದಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ