ರಾಜ್ಯಸಭೆ ನಿರೀಕ್ಷಿತ ಫಲಿತಾಂಶ ಪ್ರಕಟ: ಕಾಂಗ್ರೆಸ್‍ಗೆ 3, ಬಿಜೆಪಿಗೆ 1 ಸ್ಥಾನ. ಹೊರ ನಡೆದ ಜೆಡಿಎಸ್

 

ಬೆಂಗಳೂರು, ಮಾ.23- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಮೂರು ಮಂದಿ ಮತ್ತು ಬಿಜೆಪಿಯ ಒಬ್ಬರು ಆಯ್ಕೆಯಾಗಿದ್ದಾರೆ. ಜೆಡಿಎಸ್ ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ ಆ ಪಕ್ಷದಿಂದ ಕಣದಲ್ಲಿದ್ದ ಫಾರುಕ್ ಅಬ್ದುಲ್ಲಾ ಅವರು ಸೋಲು ಕಂಡಿದ್ದಾರೆ.
ಕಾಂಗ್ರೆಸ್‍ನಿಂದ ಸಾಹಿತಿ ಹಾಗೂ ವಿಧಾನ ಪರಿಷತ್‍ನ ಮಾಜಿ ಸದಸ್ಯ ಎಲ್.ಹನುಮಂತಯ್ಯ, ಎಐಸಿಸಿ ವಕ್ತಾರ ಸೈಯ್ಯದ್ ನಾಜೀರ್ ಹುಸೇನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್ ಆಯ್ಕೆಯಾಗಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ರಾಜೀವ್ ಚಂದ್ರಶೇಖರ್ ಗೆಲುವು ಸಾಧಿಸಿ ಮೂರನೆ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದಾರೆ.

ರಾಜ್ಯಸಭೆಯ ನಾಲ್ಕು ಸ್ಥಾನಗಳ ಆಯ್ಕೆಗೆ 188 ಮಂದಿ ಮತ ಚಲಾಯಿಸಿದ್ದರು. ಅದರಲ್ಲಿ ಎಲ್.ಹನುಮಂತಯ್ಯ 44.. ಮತಗಳನ್ನು, ಸೈಯ್ಯದ್ ನಾಜೀರ್ ಹುಸೇನ್ 42.. ಮತಗಳನ್ನು, ಜಿ.ಸಿ. ಚಂದ್ರಶೇಖರ್46 .. ಮತಗಳನ್ನು., ಬಿಜೆಪಿ ಅಭ್ಯರ್ಥಿಯಾಗಿದ್ದ ರಾಜೀವ್ ಚಂದ್ರಶೇಖರ್ 50.. ಮತಗಳನ್ನು ಪಡೆದಿದ್ದಾರೆ.
ಜೆಡಿಎಸ್‍ದೂರು ಹಿನ್ನೆಲೆಯಲ್ಲಿ 2 ಮತ ಗಳ ಎಣಿಕೆ ನಡೆಯಲಿಲ್ಲ,4 ಮತಗಳು ಅಸಿಂಧು ವಾದವು

ವಿಧಾನಸೌಧದ ಮೊದಲನೆ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಇಂದು ಬೆಳಗ್ಗೆ 9 ರಿಂದ ಸಂಜೆ 4.30 ವರೆಗೆ ಮತದಾನ ನಡೆಯಿತು. ಬಿಜೆಪಿ ಶಾಸಕರು ಬೆಳಗ್ಗೆಯೇ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬಿಜೆಪಿ ಶಾಸಕ ಡಿ.ಎನ್.ಜೀವರಾಜ್ ಮೊದಲು ಮತದಾನ ಮಾಡಿದರು.
ಕಾಂಗ್ರೆಸ್ ಪಕ್ಷ ಮೂರನೇ ಅಭ್ಯರ್ಥಿಯನ್ನು ಹೆಚ್ಚುವರಿಯಾಗಿ ಕಣಕ್ಕಿಳಿಸಿತ್ತು. ಶತಾಯ ಗತಾಯ ಹೆಚ್ಚುವರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕು, ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಬೇಕು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಖಾಡಕ್ಕಿಳಿದಿದ್ದರು. ಬೆಳಗ್ಗೆಯೇ ಶಾಸಕಾಂಗ ಸಭೆ ಕರೆದಿದ್ದ ಸಿದ್ದರಾಮಯ್ಯ ಎಲ್ಲಾ ಶಾಸಕರನ್ನು ಕರೆದು ಮತ ಹಾಕುವಂತೆ ಸೂಚಿಸುತ್ತಿದ್ದರು. ಹನುಮಂತಯ್ಯ ಅವರಿಗೆ 45, ನಾಸೀರ್ ಹುಸೇನ್‍ಗೆ 44, ಚಂದ್ರಶೇಖರ್ ಅವರಿಗೆ 42 ಮತಗಳನ್ನು ಹಂಚಲಾಗಿತ್ತು. ಜೆಡಿಎಸ್‍ನ ಏಳು ಮಂದಿ ಬಂಡಾಯ ಶಾಸಕರು, ಇತ್ತೀಚೆಗೆ ಕಾಂಗ್ರೆಸ್ ಸೇರಿದ ಶಾಸಕರು ಹಾಗೂ ಪಕ್ಷೇತರ ಶಾಸಕರನ್ನು ಮೂರನೇ ಅಭ್ಯರ್ಥಿ ಚಂದ್ರಶೇಖರ್ ಅವರಿಗೆ ಮತ ಹಾಕುವಂತೆ ನಿರ್ದೇಶಿಸಲಾಗಿತ್ತು. ಕಾಂಗ್ರೆಸ್‍ನ ಶಾಸಕರಾದ ಬೇಲೂರು ಕ್ಷೇತ್ರದ ರುದ್ರೇಶ್ ಗೌಡ ತೀವ್ರ ಅನಾರೋಗ್ಯದಿಂದ ಮತದಾನದಲ್ಲಿ ಭಾಗವಹಿಸಲಿಲ್ಲ. ಉಳಿದಂತೆ ಎಲ್ಲಾ ಶಾಸಕರು ಹಾಜರಾಗಿದ್ದರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ಮೂರೂ ಪಕ್ಷಗಳೂ ತಮ್ಮ ತಮ್ಮ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಶಾಸಕರಿಗೆ ವಿಪ್ ನೀಡಿದ್ದವು. ಅಮಾನತುಗೊಂಡಿರುವ ಏಳು ಶಾಸಕರೂ ಸೇರಿದಂತೆ ಎಲ್ಲಾ 37 ಮಂದಿಗೈ ಜೆಡಿಎಸ್ ವಿಪ್ ನೀಡಿತ್ತು. ಕಾಂಗ್ರೆಸ್ ಮೂರನೇ ಅಭ್ಯರ್ಥಿಗೆ ಹೆಚ್ಚುವರಿಯಾಗಿ ಎರಡನೇ ಪ್ರಾಶಸ್ತ್ಯ ಮತಗಳನ್ನು ಹಾಕಿಸಲಾಯಿತು.
ಬಿಜೆಪಿಯಿಂದ ಪಕ್ಷದ ಚುನಾವಣಾ ಏಜೆಂಟರಾಗಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತು ಡಿ.ಎನ್.ಜೀವರಾಜ್ ಕಾರ್ಯನಿರ್ವಹಿಸಿದರೆ, ಕಾಂಗ್ರೆಸ್‍ನಿಂದ ಬೋಸ್‍ರಾಜ್ ಹಾಗೂ ಜೆಡಿಎಸ್‍ನಿಂದ ಮಾಜಿ ಸಚಿವ ಎಚ್.ಡಿ.ರೇವಣ್ಣ ಕಾರ್ಯನಿರ್ವಹಿಸಿದರು.
ವಿಧಾನಸಭೆ ಕಾರ್ಯದರ್ಶಿ ಹಾಗೂ ರಾಜ್ಯಸಭೆಯ ಚುನಾವಣಾಧಿಕಾರಿ ಎಸ್.ಮೂರ್ತಿ ಕೆಲಸ ಮಾಡಿದರು. ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ವೀಕ್ಷಕರಾಗಿ ಆಗಮಿಸಿ ಮತದಾನದ ಪ್ರಕ್ರಿಯೆ ಮೇಲೆ ನಿಗಾ ಇಟ್ಟಿದ್ದರು.
ಹಿರಿಯ ಶಾಸಕರಾದ ಕಾಗೋಡು ತಿಮ್ಮಪ್ಪ, ಬಾಬುರಾವ್ ಚಿಂಚಣಸೂರ್ ಅವರು ಮತದಾನದಲ್ಲಿ ತಪ್ಪು ಆಯ್ಕೆ ಮಾಡಿ ಮತ ಹಾಕಿದ್ದರಿಂದ ಗೊಂದಲ ಉಂಟಾಯಿತು. ತಪ್ಪಿನ ಅರಿವಾದ ನಂತರ ಇಬ್ಬರು ಶಾಸಕರು ಮತ್ತೊಮ್ಮೆ ಮತಪತ್ರ ಪಡೆದು ಎರಡನೆ ಬಾರಿಗೆ ಮತ ಚಲಾಯಿಸಿದರು. ಇದನ್ನು ತೀವ್ರವಾಗಿ ವಿರೋಧಿಸಿದ ಜೆಡಿಎಸ್ ಎರಡು ಮತಗಳನ್ನು ಅಸಿಂಧುಗೊಳಿಸಬೇಕು ಎಂದು ಪ್ರತಿಭಟನೆ ನಡೆಸಿತ್ತು. ಚುನಾವಣಾ ಆಯೋಗ ಅದನ್ನು ಪರಗಣಿಸದೆ ಇದ್ದರಿಂದ ಜೆಡಿಎಸ್ ಮತದಾನವನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿತ್ತು. ಇದರಿಂದ 224 ಶಾಸಕರ ಪೈಕಿ ಮೂರು ಮಂದಿ ಶಾಸಕರು ನಿಧನರಾಗಿದ್ದು, ನಾಲ್ಕು ಜನ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಉಳಿದ 217 ಶಾಸಕರು ಮತ ಚಲಾಯಿಸಬೇಕಿತ್ತು. ಅವರು ಪೈಕಿ ಕಾಂಗ್ರೆಸ್‍ನ ರುದ್ರೇಶ್‍ಗೌಡ, ಜೆಡಿಎಸ್‍ನ 28 ಮಂದಿ ಗೈರು ಹಾಜರಾಗಿ, 188 ಮಂದಿ ಮಾತ್ರ ಮತ ಚಲಾಯಿಸಿದರು.
ಜೆಡಿಎಸ್‍ನ 37 ಶಾಸಕರಲ್ಲಿ ಏಳು ಮಂದಿ ಬಂಡಾಯಗಾರರನ್ನು ಹೊರತು ಪಡಿಸಿ 30 ಮಂದಿ ಮಾತ್ರ ಪಕ್ಷಕ್ಕೆ ಮತ ಹಾಕುವ ನಿರೀಕ್ಷೆ ಇತ್ತು. ಅದರಲ್ಲಿ ಆರಂಭದಲ್ಲೆ 9 ಮಂದಿ ಮತ ಚಲಾವಣೆ ಮಾಡಿದ್ದರು. ಡಬ್ಬಲ್ ಮತ ಪತ್ರ ಗೊಂದಲದ ನಂತರ ಜೆಡಿಎಸ್ ಮತದಾನ ಬಹಿಷ್ಕರಿಸಿದ್ದರಿಂದ 28 ಮಂದಿ ಮತದಾನ ಮಾಡದೇ ಹೊರಗುಳಿದರು. ಹಿಗಾಗಿ ಮತದಾನದ ಪ್ರಮಾಣವೂ ಕಡಿಮೆ ಆಗುವಂತಾಯಿತು.

217 ಪ್ರಸ್ತುತ ವಿಧಾನಸಭೆ ಸದಸ್ಯ ಬಲ 188 ಮತ ಚಲಾವಣೆ ರಾಜೀವ್ ಚಂದ್ರಶೇಖರ್ -50, ಜೆ.ಸಿ.ಚಂದ್ರಶೇಖರ್ -46, ಎಲ್.ಹನುಮಂತಯ್ಯ-44 ಹಾಗೂ ಸೈಯದ್ ನಾಸೀರ್ ಹುಸೈನ್-42 2 ಅಸಿಂಧು 2 ತಿರಸ್ಕೃತ 2 ಜೆಡಿಎಸ್ ಗೆ ಜೆಡಿಎಸ್ ನ 28 ಮಂದಿ ಬಹಿಷ್ಕಾರ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ