ಬೆಂಗಳೂರು, ಮಾ.23- ಮೈಸೂರು ಭಾಗದಲ್ಲಿ ರಾಹುಲ್‍ಗಾಂಧಿ ಪ್ರವಾಸ ಕೈಗೊಳ್ಳುವ ವೇಳೆ ಜೆಡಿಎಸ್‍ನ ಏಳು ಮಂದಿ ಬಂಡಾಯ ಶಾಸಕರೂ ಸೇರಿದಂತೆ ಇತರೆ ಪಕ್ಷಗಳಿಂದ ಹಲವಾರು ಪ್ರಮುಖ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ಎರಡು ದಿನ ರಾಹುಲ್‍ಗಾಂಧಿ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಮೊದಲಿಗೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ನಂತರ ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಲಿದ್ದಾರೆ. ಆ ನಂತರ ಮಳವಳ್ಳಿವರೆಗೂ ರೋಡ್ ಶೋ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಜೆಡಿಎಸ್‍ನ ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.ಚಾಮರಾಜನಗರದಲ್ಲಿ ದಿ.ರಾಚಯ್ಯ ಅವರ ಮಗ ಕೃಷ್ಣಮೂರ್ತಿ, ಮೈಸೂರಿನಲ್ಲಿ ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ, ಸೊರವರ ಶ್ರೀನಿವಾಸ್ ಮತ್ತಿತರರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.
ರೈತ ಸಂಘದ ನಾಯಕ ದಿ.ಪುಟ್ಟಣ್ಣಯ್ಯ ಅವರ ಪುತ್ರ ಕಾಂಗ್ರೆಸ್ ಸೇರ್ಪಡೆಯಾಗುತ್ತಿಲ್ಲ. ಬಹುಶಃ ಅವರು ರೈತ ಸಂಘದಿಂದಲೇ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಜೆಡಿಎಸ್ ಶಾಸಕರಾಗಿದ್ದ ದಿ.ಚಿಕ್ಕಮಾದು ಅವರ ಪುತ್ರ ಹೆಗ್ಗಡದೇವನಕೋಟೆಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಸಿಎಂ ಹೇಳಿದರು.