ಬೆಂಗಳೂರು, ಮಾ.23-ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ಪಾಲಿಕೆ ಸಭೆಯಲ್ಲಿ ಮತ್ತೆ ಮೂವರು ಸದಸ್ಯೆಯರು ವಾಗ್ದಾಳಿ ನಡೆಸಿ ಪ್ರತಿಭಟಿಸಿದರು.
ಕಾಂಗ್ರೆಸ್ನ ಆಶಾಸುರೇಶ್, ಜೆಡಿಎಸ್ನ ಮಂಜುಳಾ ನಾರಾಯಣಸ್ವಾಮಿ, ಬಿಜೆಪಿಯ ಮಮತಾ ವಾಸುದೇವ್ ಸಭೆ ನಡೆಯುತ್ತಿದ್ದಾಗಲೇ ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಆಶಾಸುರೇಶ್ ಮಾತನಾಡಿ, ಯಾವುದೇ ಕಾರ್ಯಕ್ರಮವಾಗಿರಲಿ ಬಿಬಿಎಂಪಿ ಸದಸ್ಯರನ್ನು ಕಡೆಗಣಿಸಿ ಶಾಸಕ ಮುನಿರತ್ನ ತಮ್ಮದೇ ಕಾರ್ಯಕ್ರಮದಂತೆ ಬಿಂಬಿಸಿಕೊಳ್ಳುತ್ತಾರೆ. ಇವರಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದೂರಿದರು.
ಆರ್.ಆರ್.ನಗರ ಕಾರ್ಯಪಾಲಕ ಅಭಿಯಂತರ ನಂದೀಶ್ ನಮಗೆ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ. ಅಧಿಕಾರಿಗಳೇನಾದರೂ ನಮ್ಮ ಫೈಲ್ಗೆ ಸಹಿ ಹಾಕಲು ಬಂದರೆ ತಕ್ಷಣವೇ ಬೆದರಿಕೆ ಕರೆ ಬಂದು ಬಿಡುತ್ತದೆ. ನಂದೀಶ್ ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.
ಕಾಮಗಾರಿಗೆ ತರಿಸುವ ಕಂಬಿಗಳು, ಜಲ್ಲಿಕಲ್ಲು ಎಲ್ಲವನ್ನೂ ಪರಿಶೀಲನೆ ಮಾಡಬೇಕು ಎಂದು ಹೇಳುತ್ತಾರೆ. ನಮ್ಮ ರಕ್ತವನ್ನೂ ಪರಿಶೀಲನೆ ಮಾಡಿಬಿಡಲಿ. ನಮಗೆ ಕೆಲಸ ಮಾಡಲೇ ಆಗುತ್ತಿಲ್ಲ. ಕೆಲಸ ಮಾಡಲು ಆಗದ ಮೇಲೆ ನಾವೇಕೆ ಸದಸ್ಯರಾಗಿರಬೇಕು. ನಾವು ಜನರಿಗೆ ಹೇಗೆ ಮುಖ ತೋರಿಸಬೇಕು ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಇದೇ ರೀತಿ ಮಂಜುಳಾ ನಾರಾಯಣಸ್ವಾಮಿ, ಮಮತಾ ವಾಸುದೇವ್ ಕೂಡ ವಾಗ್ದಾಳಿ ನಡೆಸಿದರು.