ಪ್ರಸಕ್ತ ಹಣಕಾಸು ವರ್ಷದಲ್ಲಿ 3,100 ಕೋಟಿ ರೂ. ತೆರಿಗೆ ಸಂಗ್ರಹ ಗುರಿ : ಆಡಳಿತ ಪಕ್ಷದ ನಾಯಕ ಎಂ.ಶಿವರಾಜು

 

ಬೆಂಗಳೂರು, ಮಾ.23-ಪ್ರಸಕ್ತ ಹಣಕಾಸು ವರ್ಷದಲ್ಲಿ 3,100 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಇಟ್ಟುಕೊಂಡಿದ್ದು ಇದು ಯಶಸ್ವಿಯಾಗಲು ಅಧಿಕಾರಿಗಳು ಹಾಗೂ ಪ್ರತಿಪಕ್ಷದವರು ಬೆಂಬಲ ನೀಡಬೇಕೆಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಮನವಿ ಮಾಡಿದರು.

ಪಾಲಿಕೆ ಸಭೆಯಲ್ಲಿ ಮಾತನಾಡಿದ ಅವರು, 2016-17ನೇ ಸಾಲಿನಲ್ಲಿ 2,300 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿತ್ತು. ಅದರಲ್ಲಿ 2,156 ಕೋಟಿ ಸಂಗ್ರಹವಾಗಿತ್ತು. ಆಗ ಆನ್‍ಲೈನ್ ಮುಖಾಂತರ 6,46,025 ಜನ ತೆರಿಗೆ ಪಾವತಿಸಿದ್ದರು. ಚಲನ್ ಮೂಲಕ 9,76,893 ಜನ ತೆರಿಗೆ ಪಾವತಿಸಿದ್ದರು. ಒಟ್ಟಾರೆ 16,20,918 ಆಸ್ತಿಗಳು ಬಿಬಿಎಂಪಿ ವ್ಯಾಪ್ತಿಯಲ್ಲಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ 3,100 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಿದ್ದೇವೆ. ನಿನ್ನೆವರೆಗೆ 2157 ಕೋಟಿ ತೆರಿಗೆ ಸಂಗ್ರಹ ಆಗಿದೆ. ಆನ್‍ಲೈನ್ ಮೂಲಕ 8,82,205 ಜನ ತೆರಿಗೆ ಪಾವತಿಸಿದ್ದಾರೆ. ಚಲನ್ ಮೂಲಕ 9,21,387 ಜನ ತೆರಿಗೆ ಕಟ್ಟಿದ್ದಾರೆ. ಒಟ್ಟು 18,3,549 ಆಸ್ತಿ ಬಿಬಿಎಂಪಿ ವ್ಯಾಪ್ತಿಯಲ್ಲಿದೆ ಎಂಬುದು ಈ ಮೂಲಕ ದೃಢಪಡುತ್ತದೆ ಎಂದು ತಿಳಿಸಿದರು.

ಪ್ರತಿವರ್ಷ ಆನ್‍ಲೈನ್ ಮೂಲಕ ಜನ ತೆರಿಗೆ ಪಾವತಿಸುತ್ತಿರುವುದು ಹೆಚ್ಚುತ್ತಿದೆ. ಇತ್ತೀಚೆಗೆ ನಗರ ಯೋಜನೆ ವಿಭಾಗದವರು 141 ಒಸಿ (ಸ್ವಾಧೀನಪತ್ರ) ನೀಡಿದ್ದಾರೆ. ಇದನ್ನೆಲ್ಲ ತೆರಿಗೆ ವ್ಯಾಪ್ತಿಗೆ ಸೇರಿಸಿ ಟೋಟಲ್ ಸ್ಟೇಷನ್ ಸರ್ವೆಯನ್ನು ಶಿಸ್ತುಬದ್ಧವಾಗಿ ಜಾರಿಗೆ ತಂದರೆ ಪಾಲಿಕೆ ಆಸ್ತಿಗಳ ಸಂಖ್ಯೆ 20 ಲಕ್ಷ ದಾಟುತ್ತದೆ. ಜೊತೆಗೆ 3,100 ಕೋಟಿ ರೂ. ತೆರಿಗೆ ಗುರಿಯನ್ನೂ ಮುಟ್ಟಬಹುದು ಎಂದು ಹೇಳಿದರು.

ನಮ್ಮ ಕಂದಾಯ ಇಲಾಖೆ ಅಧಿಕಾರಿಗಳು ಟಾಪ್‍ಲೈನ್ ತೆರಿಗೆ ವಂಚಕರನ್ನು ಪಟ್ಟಿ ಮಾಡಿ ತೆರಿಗೆ ವಸೂಲಿ ಮಾಡಿದರೆ 50 ಕೋಟಿ ತೆರಿಗೆ ಬರುತ್ತದೆ ಎಂದು ಹೇಳಿದರು.
ಈ ವೇಳೆ ಮೇಯರ್ ಸಂಪತ್‍ರಾಜ್ ಮಾತನಾಡಿ, ಟಾಪ್‍ಲೈನ್ ಬೇಡ, ಟಾಪ್ ಫಿಪ್ಟಿ ಮಾಡಿದರೆ ಇನ್ನು ಹೆಚ್ಚು ತೆರಿಗೆ ಸಂಗ್ರಹಿಸಬಹುದು. ನೂರಕ್ಕೆ ನೂರರಷ್ಟು ತೆರಿಗೆ ಪಾವತಿ ವ್ಯವಸ್ಥೆಯನ್ನು ಆನ್‍ಲೈನ್ ಮೂಲಕ ಜಾರಿಗೆ ತಂದರೆ ನಿಗದಿತ ತೆರಿಗೆ ಸಂಗ್ರಹ ಗುರಿ ಮುಟ್ಟಬಹುದು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ