ನವದೆಹಲಿ, ಮಾ.23-ಕೇಂದ್ರದಲ್ಲಿ ಲೋಕಪಾಲರ ನೇಮಕ, ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಇಂದು ಮತ್ತೆ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕಳೆದ 7 ವರ್ಷಗಳ ಹಿಂದೆ ಅಂದರೆ 2011ರಲ್ಲಿ ಭ್ರಷ್ಟಾಚಾರ ನಿಗ್ರಹ ಮತ್ತು ಲೋಕಪಾಲರ ನೇಮಕಕ್ಕೆ ಆಗ್ರಹಿಸಿ ಅಣ್ಣಾ ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇವರ ಹೋರಾಟಕ್ಕೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿ ದೇಶ-ವಿದೇಶಗಳಲ್ಲೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಈಗ ಅದೇ ಸ್ಥಳದಲ್ಲಿ ನಿರಶನ ಆರಂಭಿಸಿದ್ದು, ಲೋಕಪಾಲ ನೇಮಕಕ್ಕೆ ಮತ್ತೊಂದು ಸುತ್ತಿನ ಹೋರಾಟಕ್ಕೆ ಅಣ್ಣಾ ಮುನ್ನುಡಿ ಬರೆದಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತ ವೈಖರಿ ವಿರುದ್ಧ ಕಿಡಿಕಾರುತ್ತಲೇ ಬಂದಿರುವ ಇವರು, ತಮ್ಮ ನಿರಶನದ ವೇಳೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಿದ್ದಾರೆ.
ಕೇಂದ್ರದಲ್ಲಿ ಲೋಕಪಾಲರು ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತರನ್ನು ನೇಮಕ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ರೈತರ ಸಮಸ್ಯೆ ನಿವಾರಣೆಗೆ ಶಿಫಾರಸುಗಳನ್ನು ಮಾಡಿರುವ ಸ್ವಾಮಿನಾಥನ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂಬುದು ಅಣ್ಣಾ ಅವರ ಪ್ರಮುಖ ಬೇಡಿಕೆಯಾಗಿದೆ.
ಅಣ್ಣಾ ಅವರ ಈ ಹೋರಾಟಕ್ಕೆ ಅನೇಕ ಸಂಘ ಸಂಸ್ಥೆಗಳು ಭಾರೀ ಬೆಂಬಲ ಸೂಚಿಸಿವೆ. ನಿರಶನದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.