ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ನಂತರ ಜನಕ್ಕೆ ತಲುಪಿದ ಪರಿಣಾಮಕಾರಿ ಯೋಜನೆ ಕೃಷಿ ಭಾಗ್ಯ

ಬೆಂಗಳೂರು,ಮಾ.23- ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ನಂತರ ಹೆಚ್ಚಾಗಿ ಜನಕ್ಕೆ ತಲುಪಿದ ಪರಿಣಾಮಕಾರಿ ಯೋಜನೆ ಎಂದರೆ ಕೃಷಿ ಭಾಗ್ಯ ಯೋಜನೆಯಾಗಿದ್ದು ಇದು ರೈತರ ಜೀವನಾಡಿ ಎಂದು ಕೃಷಿ ಆಯುಕ್ತ ಡಿ.ಸತೀಶ್ ಅಭಿಪ್ರಾಯಪಟ್ಟರು.

ನಗರದ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಭಾಗ್ಯ ಯೋಜನೆಯಡಿ ಪ್ರಯೋಜನ ಪಡೆದ ರೈತರ ಅನುಭವ ವಿನಿಮಯ ಹಾಗೂ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೃಷಿ ಭಾಗ್ಯ ಯೋಜನೆಯು ಯಶಸ್ವಿಯಾಗಿದ್ದು, ತಂತ್ರಜ್ಞಾನ ಬಳಕೆಯಲ್ಲೂ ಮಹತ್ತರ ಗುರಿ ತಲುಪಲಾಗಿದೆ. ಎಂಟು ಲಕ್ಷ ರೈತರಿಗೆ ಮೊಬೈಲ್ ಮೂಲಕ ಹವಾಮಾನದ ಮುನ್ಸೂಚನೆ ವರದಿಯನ್ನು ನೀಡಲಾಗುತ್ತಿದೆ . ಈ ಯೋಜನೆ ರಾಜ್ಯದ ಕೃಷಿ ಪದ್ಧತಿಯನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ಕೃಷಿಯನ್ನು ಲಾಭದಾಯಕ ಉದ್ದಿಮೆಯತ್ತ ಕೊಂಡೊಯ್ಯಲಿದೆ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಪ್ರಧಾನ ಚಟುವಟಿಕೆಗಳನ್ನು ಉನ್ನತೀಕರಣಗೊಳಿಸುವುದು ಇಲಾಖೆ ಉದ್ದೇಶವಾಗಿದೆ. ನೀರಾವರಿ ವ್ಯವಸ್ಥೆ ಇಲ್ಲದೆ ಯಾವುದೇ ಯೋಜನೆಯೂ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದರು.

ಇತ್ತೀಚಿನ ದಿನಗಳಲ್ಲಿ ಮಳೆ ಬೀಳುವ ದಿನಗಳು ಅತ್ಯಂತ ಕಡಿಮೆಯಾಗಿದೆ. ಹಾಗಾಗಿ ಹೊಲಗಳಲ್ಲಿ ಹೊಂಡಗಳನ್ನು ಮಾಡಿಕೊಂಡು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಕೃಷಿಯನ್ನು ಉತ್ತಮಪಡಿಸಿಕೊಳ್ಳಬೇಕು ಎಂದ ಅವರು, ಎರಡು ಲಕ್ಷಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಿದ್ದೇವೆ ಎಂದು ತಿಳಿಸಿದರು.
2010ರಲ್ಲಿ ಆಹಾರ ಉತ್ಪಾದನೆ 130 ಲಕ್ಷ ಟನ್ ಇತ್ತು. ಆದರೆ ಇಂದು 90ರಿಂದ 95 ಲಕ್ಷ ಟನ್ ಇಳಿದಿದೆ. ಇದನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸುವ ಸಂಬಂಧ ಯೋಜನೆಗಳನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಕೃಷಿ ಇಲಾಖೆ ಮುಖ್ಯ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ಮಾತನಾಡಿ, ಕೃಷಿ ಭಾಗ್ಯ ಯೋಜನೆಯ ಲಾಭ ಪಡೆದು ರೈತರು ತಮ್ಮ ಜೀವನವನ್ನು ಹಸನು ಮಾಡಿಕೊಳ್ಳಬೇಕು. ಬರಪೀಡಿತ ಜಿಲ್ಲೆಗಳಲ್ಲಿ ಎರಡು ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಲಾಗುವುದು 3000 ಪಾಲಿ ಹೌಸ್‍ಗಳ ನಿರ್ಮಾಣ ಮಾಡಲಾಗಿದೆ ಎಂದರು.
ನಮ್ಮ ರಾಜ್ಯದಲ್ಲಿ 16 ಜಿಲ್ಲೆಗಳು ಬರಪೀಡಿತ ಪ್ರದೇಶವಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೊಡ್ಡಬಳ್ಳಾಪುರದ ಫಲಾನುಭವಿ ರಮೇಶ್ ಹೊಸಳ್ಳಿ ಮಾತನಾಡಿ,ಕೃಷಿ ಭಾಗ್ಯ ಯೋಜನೆಯಡಿ ನಮ್ಮ ತೋಟದಲ್ಲಿ ಕೃಷಿ ಹೊಂಡ ವನ್ನು ನಿರ್ಮಿಸಿ ನೀರು ಆವಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ತನಗೆ ಸಾಕಷ್ಟು ಅನುಕೂಲವಾಗಿದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಈ ಕಾರ್ಯಾಗಾರದಲ್ಲಿ ರೈತ ಮುಖಂಡ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಸ್ಮರಿಸಲಿಲ್ಲ ಎಂಬ ಕಾರಣಕ್ಕೆ ರೈತರು ಬೇಸರ ವ್ಯಕ್ತಪಡಿಸಿದರು.
ಕೃಷಿ ಬೆಲೆ ಆಯೋಗದ ಅಧ್ಯಕ್ಷ ಬಿ.ವೈ.ಶ್ರೀನಿವಾಸ್, ಅಪರ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್, ಬೆಂಗಳೂರು ವಿವಿ ಸಂಶೋಧನಾ ನಿರ್ದೇಶಕ ಡಾ.ಷಡಕ್ಷರಿ, ಧಾರವಾಡ ಕೃಷಿ ವಿವಿಯ ವೈ.ವಿ.ಬೆಣಗಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ