![download](http://kannada.vartamitra.com/wp-content/uploads/2018/03/download-2-502x381.png)
ನವದೆಹಲಿ, ಮಾ.23-ಭಾರತೀಯ ವಾಯು ಪಡೆ(ಐಎಎಫ್) ಚೀನಾಗಿಂತಲೂ ಬಲಿಷ್ಠವಾಗಿದ್ದು, ಉತ್ತಮ ಸ್ಥಿತಿಯಲ್ಲಿದೆ ಎಂದು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾ ಹೇಳಿದ್ದಾರೆ.
ಈಶಾನ್ಯ ರಾಜ್ಯ ಸಿಕ್ಕಿಂನ ಡೋಕ್ಲಂ ಪ್ರಾಂತ್ಯದಲ್ಲಿ ಚೀನಾದ ಸೇನಾ ನೆಲೆಗಳ ನಿರ್ಮಾಣವಾಗುತ್ತಿರುವ ಬಗ್ಗೆ ಭಾರತೀಯ ಭೂ ಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಆತಂಕ ವ್ಯಕ್ತಪಡಿಸಿರುವ ಬೆನ್ನಲ್ಲೇ ವಾಯು ಪಡೆಯ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ.
ರಾಜಧಾನಿ ಹಲ್ವಾರಾ ವಾಯು ಪಡೆ ನೆಲೆಯಲ್ಲಿ ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಐಎಎಫ್ ವಿಶೇಷವಾಗಿ ಭಾರತದ ಪೂರ್ವ ಮತ್ತು ಈಶಾನ್ಯ ವಲಯದಲ್ಲಿ ಚೀನಾಗಿಂತಲೂ ಬಲಿಷ್ಠವಾಗಿದೆ. ಈ ವಿಷಯದಲ್ಲಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಬಜೆಟ್ನಲ್ಲಿ ರಕ್ಷಣಾ ಇಲಾಖೆಗೆ ಘೋಷಿಸಿರುವ ಅನುದಾನ ಮತ್ತು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ನಾವು ಮುನ್ನಡೆಯುತ್ತೇವೆ ಎಂದು ಏರ್ ಚೀಫ್ ಮಾರ್ಷಲ್ ಹೇಳಿದರು.