
ನಳಂದ, ಮಾ.23-ಅಕ್ರಮ ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿ ಆರು ಮಂದಿ ಮೃತಪಟ್ಟು, ಇತರ 25 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಗಾಯಾಳುಗಳಲ್ಲಿ 17 ಮಂದಿ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ನಳಂದ ಜಿಲ್ಲೆಯ ಜಲಾಲ್ಪುರ್ ಪ್ರದೇಶದಲ್ಲಿದ್ದ ಪಟಾಕಿ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ 5 ಗಂಟೆಯಲ್ಲಿ ಭಾರೀ ಸ್ಫೋಟ ಸಂಭವಿಸಿತು.
ಸ್ಫೋಟದಿಂದಾಗಿ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಐವರಿಗೆ ತೀವ್ರ ಸುಟ್ಟಗಾಯಗಳಾಗಿವೆ. ಈ ದುರಂತದಲ್ಲಿ ಕಾರ್ಖಾನೆ ಧ್ವಂಸವಾಗಿದ್ದು, ಅಕ್ಕಪಕ್ಕದ ಐದು ಮನೆಗಳಿಗೆ ತೀವ್ರ ಹಾನಿಯಾಗಿದೆ. ಸ್ಫೋಟದ ತೀವ್ರತೆಗೆ 1ಕಿಮೀ ವ್ಯಾಪ್ತಿಯ ಪ್ರದೇಶವೂ ಕಂಪಿಸಿತು. ಸ್ಫೋಟದಿಂದ ಕಾರ್ಖಾನೆಗೆ ಬೆಂಕಿ ಆವರಿಸಿತು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಸಿಬ್ಬಂದಿ ಎರಡು ಗಂಟೆಗಳ ಸತತ ಪರಿಶ್ರಮದ ನಂತರ ಬೆಂಕಿಯ ಕೆನ್ನಾಲಗೆಯನ್ನು ನಂದಿಸಿದರು. ಗಾಯಗೊಂಡ 25 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ 17 ಜನರ ಸ್ಥಿತಿ ಶೋಚನೀಯವಾಗಿದೆ.
ಈ ಘಟನೆಗೆ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. ನಳಂದ ಜಿಲ್ಲಾ ದಂಡಾಧಿಕಾರಿ ಮತ್ತು ಉನ್ನತ ಪೆÇಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಯೋತ್ಪಾದನೆ ನಿಗ್ರಹ ದಳ(ಎಟಿಎಂ)ದ ಎಂಟು ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಸ್ಫೋಟದ ಕಾರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.