
ಬೀಜಿಂಗ್, ಮಾ.23-ಅಮೆರಿಕ ಮತ್ತು ಚೀನಾ ನಡುವೆ ಆರ್ಥಿಕ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ. ಹಂದಿ ಮಾಂಸ ಸೇರಿದಂತೆ ಅಮೆರಿಕದ 128 ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ವಿಧಿಸುವ ಯೋಜನೆಯನ್ನು ಚೀನಾ ಇಂದು ಅನಾವರಣಗೊಳಿಸಿದೆ. ಇದರಿಂದಾಗಿ ಅಮೆರಿಕದ 3 ಶತಕೋಟಿ ಡಾಲರ್ ಸರಕುಗಳ ಮೇಲೆ ಹೆಚ್ಚಿನ ಸುಂಕ ಬೀಳಲಿದೆ.
ಅಲ್ಯೂಮಿನಿಯಂ ರಫ್ತು ಸೇರಿದಂತೆ ಕೆಲವು ವಸ್ತುಗಳ ಮೇಲೆ ಅಧಿಕ ಸುಂಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಸೆಡ್ಡು ಹೊಡೆಯಲು ಚೀನಾ ಮುಂದಾಗಿದ್ದು, ಆರ್ಥಿಕ ಸಮರಕ್ಕೆ ಕಾರಣವಾಗಲಿದೆ.
ಅಮೆರಿಕದ ಹಂದಿ ಮಾಂಸ, ವೈನ್, ಹಣ್ಣುಗಳು, ಉಕ್ಕು ಕೊಳವೆ ಸೇರಿದಂತೆ ಒಟ್ಟು 128 ಉತ್ಪನ್ನಗಳನ್ನು ಗುರಿಯಾಗಿಟ್ಟುಕೊಂಡು ಸುಂಕ ವಿನಾಯಿತಿಯನ್ನು ಚೀನಾ ರದ್ದುಗೊಳಿಸಿದೆ ಎಂದು ವಾಣಿಜ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಈ ಉತ್ಪನ್ನಗಳ ಮೇಲೆ ಶೇ.15 ರಿಂದ ಶೇ.25ರಂದು ಹೆಚ್ಚಿನ ತೆರಿಗೆ ವಿಧಿಸಲು ಚೀನಾ ಮುಂದಾಗಿದ್ದು, ಭಾರೀ ಬೇಡಿಕೆ ಇರುವ ಅಮೆರಿಕದ ಸರಕುಗಳ ಮಾರಾಟಕ್ಕೆ ಇದರಿಂದ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳಲಿದೆ.