
ನವದೆಹಲಿ, ಮಾ.23-ದೇಶೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲದ ಬೆಲೆ ಏಪ್ರಿಲ್ 1ರಿಂದ ಏರಿಕೆಯಾಗಲಿದ್ದು, ಎರಡು ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.
ಇದರಿಂದಾಗಿ ಅಡುಗೆ ಅನಿಲ (ಕೊಳವೆ ಮೂಲಕ ಪೂರೈಸುವ ನೈಸರ್ಗಿಕ ಅನಿಲ ಅಥವಾ ಪಿಎನ್ಜಿ) ಹಾಗೂ ವಾಹನಗಳಿಗೆ ಬಳಸುವ ಸಿಎನ್ಜಿ(ಸಂಕುಚಿತ ನೈಸರ್ಗಿಕ ಅನಿಲ) ಬೆಲೆ ದುಬಾರಿಯಾಗಲಿದೆ.
ದೇಶೀಯ ಉತ್ಪಾದನಾ ಸಂಸ್ಥೆಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ದರ ಪರಿಷ್ಕರಣೆಗೆ ಅನುಮತಿ ನೀಡಲಾಗಿದೆ. ನೈಸರ್ಗಿಕ ಅನಿಲದ ಬೆಲೆ ದಶಲಕ್ಷ ಬ್ರಿಟಿಷ್ ಥರ್ಮಲ್ ಯೂನಿಟ್ಗೆ ಪ್ರಸ್ತುತ 2.89 ಡಾಲರ್ ಇದೆ. ಅದು 3.06 ಡಾಲರ್ಗಳಿಗೆ ಏರುವ ಸಾಧ್ಯತೆ ಇದ್ದು, ತತ್ಪರಿಣಾಮ ಪಿಎನ್ಜಿ ಮತ್ತು ಸಿಎನ್ಜಿ ಬೆಲೆ ಹೆಚ್ಚಾಗಲಿದೆ.
ಎರಡು ವರ್ಷಗಳ ಹಿಂದೆ ಅಂದರೆ ಮಾರ್ಚ್ 2016ರಲ್ಲಿ 3.82 ಡಾಲರ್ ಗರಿಷ್ಠ ಮಟ್ಟಕ್ಕೆ ಬೆಲೆ ಏರಿಕೆಯಾದ ನಂತರ ಕಂಡುಬಂದ ಅಧಿಕ ಪ್ರಮಾಣದ ಹೆಚ್ಚಳ ಇದಾಗಿದೆ.