ಬೆಂಗಳೂರು, ಮಾ.23-ಲಿಂಗಾಯತ ಧರ್ಮ ಪ್ರತ್ಯೇಕ ಶಿಫಾರಸು ಮಾಡಿರುವ ರಾಜ್ಯಸರ್ಕಾರದ ಕ್ರಮದ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ರಾಜ್ಯಸಭೆ ಚುನಾವಣೆ ನಂತರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತರ ಬೇಡಿಕೆ ಆಧರಿಸಿ ಪ್ರತ್ಯೇಕ ಧರ್ಮದ ಶಿಫಾರಸ್ಸು ನಿರ್ಧಾರವನ್ನು ರಾಜ್ಯಸರ್ಕಾರ ಕೈಗೊಂಡಿದೆ. ಈ ಸಂಬಂಧ ಯಡಿಯೂರಪ್ಪ, ಜಗದೀಶ್ಶೆಟ್ಟರ್ ತಮ್ಮ ಅಭಿಪ್ರಾಯವನ್ನು ತಿಳಿಸದೆ ಮೌನ ವಹಿಸಿದ್ದಾರೆ. ಇದರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ವೀರಶೈವ ಲಿಂಗಾಯತರ ಬೇಡಿಕೆ ಆಧರಿಸಿ ಸಮಿತಿ ರಚಿಸಿ ಸರ್ಕಾರ ಸಮಿತಿಯ ವರದಿ ಅನ್ವಯ ಪ್ರತ್ಯೇಕ ಧರ್ಮದ ಶಿಫಾರಸ್ಸನ್ನು ಮಾಡಿದೆ. ಆ ಸಮುದಾಯದ ಮುಖಂಡರಾದ ಜಗದೀಶ್ ಶೆಟ್ಟರ್ ಹಾಗೂ ಯಡಿಯೂರಪ್ಪನವರು ಏನು ಮಾತನಾಡುತ್ತಿಲ್ಲ. ಸರ್ಕಾರದ ನಿರ್ಧಾರ ಸಂಬಂಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕಾದ ಅಗತ್ಯವಿದೆ ಎಂದು ದಿನೇಶ್ಗುಂಡೂರಾವ್ ಹೇಳಿದರು.