ಬೆಂಗಳೂರು, ಮಾ.23- ರಾಜ್ಯಸಭೆ ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಎಲ್ಲವೂ ನ್ಯಾಯಸಮ್ಮತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ ಮೂರು ಜನ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ಮೂವರೂ ಗೆಲ್ಲುವ ವಿಶ್ವಾಸವಿದೆ. ಗೆಲುವಿಗೆ ಬೇಕಾದಷ್ಟು ಮತಗಳು ನಮ್ಮ ಬಳಿ ಇವೆ. ಜೆಡಿಎಸ್ನವರು ಬಹಿಷ್ಕಾರವನ್ನಾದರೂ ಹಾಕಿಕೊಳ್ಳಲಿ, ಗೈರು ಹಾಜರಿಯಾದರೂ ಆಗಲಿ.ಅದಕ್ಕೂ ನಮಗೂ ಸಂಬಂಧವಿಲ್ಲ ಎಂದರು.
ಕಾಗೋಡು ತಿಮ್ಮಪ್ಪ, ಬಾಬೂರಾವ್ ಚಿಂಚನಸೂರು ಅವರು ಮತ ಚಲಾವಣೆ ಮಾಡುವ ಅಂತಿಮ ಹಂತದಲ್ಲಿ ತಪ್ಪು ಮಾಡಿರುವುದನ್ನು ಗಮನಿಸಿದ್ದಾರೆ ಹಾಗಾಗಿ ಮತ್ತೊಂದು ಮತ ಪತ್ರ ಪಡೆದು ವೋಟ್ ಹಾಕಿದ್ದಾರೆ. ಈ ರೀತಿ ಮಾಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಜೆಡಿಎಸ್ನವರು ಸೋಲಿನ ಭಯದಿಂದ ಹತಾಶರಾಗಿ ಮಾತನಾಡುತ್ತಿದ್ದಾರೆ. ಈಗಾಗಲೇ ಕೋರ್ಟ್ಗೆ ಹೋಗಿ ದಾವೆ ಹೂಡಲು ಪ್ರಯತ್ನಿಸಿ ವಿಫಲರಾದರು. ಯಾವುದೇ ದಾರಿಗಳು ಇಲ್ಲದೇ ಇರುವುದರಿಂದ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ವೀರಶೈವ-ಲಿಂಗಾಯಿತ ಧರ್ಮಕ್ಕೆ ಶಿಫಾರಸು:
ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಆಧರಿಸಿ ವೀರಶೈವ-ಲಿಂಗಾಯಿತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಸಚಿವ ಸಂಪುಟಸಭೆ ನಿರ್ಧಾರ ತೆಗೆದುಕೊಂಡಿದ್ದು, ಆ ಕುರಿತ ಶಿಫಾರಸ್ಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಅನುದಾನ ಹಂಚಿಕೆಯಲ್ಲಿ ತಾರತಮ್ಯ:
ರಾಜ್ಯದಿಂದ ಪಾವತಿಯಾಗುತ್ತಿರುವ ತೆರಿಗೆಯಲ್ಲಿ ಶೇಕಡ ಅರ್ಧದಷ್ಟು ಕೂಡ ಕೇಂದ್ರ ಸರ್ಕಾರದಿಂದ ಅನುದಾನ ರಾಜ್ಯಕ್ಕೆ ಲಭ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರಕ್ಕೆ ಸಲ್ಲಿಕೆಯಾಗುವ ಒಟ್ಟಾರೆ ತೆರಿಗೆಯಲ್ಲಿ ಕರ್ನಾಟಕದಿಂದಲೇ ಶೇ.9.47ರಷ್ಟು ತೆರಿಗೆ ಸಂದಾಯವಾಗುತ್ತಿದೆ ಎಂದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನೀಡುತ್ತಿರುವ ಅನುದಾನದ ಪ್ರಮಾಣ ಶೇ.4.6ರಷ್ಟಿದೆ. ತೆರಿಗೆ ಸಂಗ್ರಹವಾದ ಅರ್ಧದಷ್ಟೂ ಕೂಡ ರಾಜ್ಯಕ್ಕೆ ಅನುದಾನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅನುದಾನ ಹಂಚಿಕೆ ವೇಳೆ ಒಟ್ಟು ಜನಸಂಖ್ಯೆ ಮತ್ತು ಅಭಿವೃದ್ಧಿಯನ್ನು ಮಾನದಂಡವಾಗಿ ಇಟ್ಟುಕೊಳ್ಳಲಾಗುತ್ತಿದೆ. ಉತ್ತರ ಪ್ರದೇಶ 22ಕೋಟಿ ಜನಸಂಖ್ಯೆ ಹೊಂದಿದೆ. ಕರ್ನಾಟಕ 6.5ಕೋಟಿ ಜನಸಂಖ್ಯೆ ಹೊಂದಿದೆ. ಈ ಹಿನ್ನೆಲೆಯಲ್ಲಿ ನಮಗೆ ಅನುದಾನ ಹಂಚಿಕೆಯಲ್ಲಿ ಕೊರತೆಯಾಗುತ್ತದೆ ಎಂದು ಅವರು ವಿವರಿಸಿದರು.