ಬೆಂಗಳೂರು, ಮಾ.23-ರಾಜ್ಯ ಸರ್ಕಾರವು ಲಿಂಗಾಯಿತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು ಖಂಡಿಸಿರುವ ನಾಡೋಜ ಡಾ.ಎಂ.ಚಿದಾನಂದಮೂರ್ತಿ, ಕೇಂದ್ರ ಸರ್ಕಾರ ಇದನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸಚಿವ ಸಂಪುಟವು ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಆಯೋಗದ ಪ್ರತ್ಯೇಕ ಲಿಂಗಾಯಿತ ಧರ್ಮದ ವರದಿಯನ್ನು ಸ್ವೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಹಿಂದೂ ಧರ್ಮವನ್ನು ವಿಭಜನೆ ಮಾಡುವ ಕುಕೃತ್ಯ ಎಂದು ಖಂಡಿಸಿದರು.
ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜಕೀಯಕ್ಕಾಗಿ ಲಿಂಗಾಯಿತ-ವೀರಶೈವರನ್ನು ವಿಭಜಿಸುವುದು ಸರಿಯಲ್ಲ. ಕೂಡಲೇ ರಾಜ್ಯ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿಕೊಂಡು ಶಿಫಾರಸನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಚಳವಳಿ ಮಾಡುವುದಾಗಿ ಎಚ್ಚರಿಸಿದರು.
ಒಂದು ವೇಳೆ ರಾಜ್ಯ ಸರ್ಕಾರ ತನ್ನ ನಿಲುವು ಬದಲಾಯಿಸದೇ ಮಾಡಿದ್ದಲ್ಲಿ ಕೇಂದ್ರ ಸರ್ಕಾರವು ಇದನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿದರು.
ವೀರಶೈವ ಮಹಾಸಭೆ ಈಗಾಗಲೇ ಲಿಂಗಾಯಿತ ವೀರಶೈವರನ್ನು ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಯುಪಿಎ ಸರ್ಕಾರದ 2013ರಲ್ಲಿ ಮತ್ತು ವಾಜಪೇಯಿ ಸರ್ಕಾರದ ಅವಧಿಯಲ್ಲಿ ಮನವಿ ಮಾಡಿ ಉಚ್ಚನ್ಯಾಯಾಲಯದ ಮೊರೆ ಹೋಗಿತ್ತು. ಆದರೆ, ಕೇಂದ್ರ ಅಲ್ಪಸಂಖ್ಯಾಂತರ ಆಯೋಗದ ಮನವಿಯನ್ನು ತಿರಸ್ಕರಿಸಿದ್ದು, ನ್ಯಾಯಾಲಯವು ಲಿಂಗಾಯಿತ-ವೀರಶೈವರನ್ನು ಹಿಂದುಗಳೇ ಎಂದು ಹೇಳಿದೆ. ಲಿಂಗಾಯಿತ-ವೀರಶೈವ ಹಿಂದು ಧರ್ಮದ ಅವಿಭಾಜ್ಯ ಅಂಗವಾಗಿದ್ದು, ಇದು ಯಾವುದೇಕಾರಣಕ್ಕೂ ವಿಭಜನೆಯಾಗಲು ಬಿಡುವುದಿಲ್ಲ ಎಂದು ಡ ಆ.ಚಿಮೂ ಸ್ಪಷ್ಟಪಡಿಸಿದರು.
ಒಂದು ವೇಳೆ ಕೇಂದ್ರವು ರಾಜಕೀಯಕ್ಕಾಗಿ ಶಿಫಾರಸು ಅಂಗೀಕರಿಸಿದ್ದಲ್ಲಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ತಿಳಿಸಿದರು.