ಬೆಂಗಳೂರು, ಮಾ.23- ನಿಯಮ ಬಾಹೀರವಾಗಿ ನಡೆಯುತ್ತಿರುವ ರಾಜ್ಯಸಭೆ ಚುನಾವಣೆ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿರುವ ಜೆಡಿಎಸ್, ಕೊನೆಯ ಹಂತದಲ್ಲಿ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿದೆ.
ರಾಜ್ಯಸಭೆ ಚುನಾವಣೆಯ ವೇಳೆ ಉಂಟಾದ ಗೊಂದಲ, ಗದ್ದಲಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಚುನಾವಣಾಧಿಕಾರಿ ಮತ್ತು ಚುನಾವಣಾ ವೀಕ್ಷಕರೂ ಕೂಡ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿಲ್ಲ. ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಹೀಗಾಗಿ ನಾವು ರಾಜ್ಯಸಭೆ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್‍ನ ಶಾಸಕರಾದ ಕಾಗೋಡು ತಿಮ್ಮಪ್ಪ, ಬಾಬೂರಾವ್ ಚಿಂಚನಸೂರ್ ಅವರು ಅಡ್ಡಮತದಾನ ಮಾಡಲು ಮುಂದಾಗಿದ್ದು, ತಾವು ಹಾಕಿದ ಮತವನ್ನು ಕಾಂಗ್ರೆಸ್‍ನ ಏಜೆಂಟರಿಗೆ ತೋರಿಸಿದ್ದಾರೆ. ತಕ್ಷಣವೇ ಆ ಮತಚೀಟಿಗಳನ್ನು ವಾಪಸ್ ಪಡೆದು ಮತ್ತೊಂದು ಮತಪತ್ರವನ್ನು ಇಬ್ಬರಿಗೂ ನೀಡಲಾಗಿದೆ. ಇದು ಚುನಾವಣೆ ಅಕ್ರಮ. ಈ ರೀತಿ ಮತಚೀಟಿ ನೀಡಲು ಅವಕಾಶವಿಲ್ಲ. ಚುನಾವಣಾಧಿಕಾರಿಯ ಈ ನಡವಳಿಕೆ ತಪ್ಪು ಎಂದು ವೀಕ್ಷಕರಾಗಿ ಆಗಮಿಸಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ. ಆದರೂ ಚುನಾವಣೆಯನ್ನು ಸ್ಥಗಿತಗೊಳಿಸದೆ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ. ಇಲ್ಲಿ ಚುನಾವಣಾ ಮತ ಕೇಂದ್ರದ ವಾತಾವರಣ ಇಲ್ಲ. ಎಲ್ಲರೂ ಶಾಮೀಲಾಗಿ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತ ಯಂತ್ರ ದುರುಪಯೋಗಪಡಿಸಿಕೊಳ್ಳುವ ಮುನ್ಸೂಚನೆಯಾಗಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರ ಸರ್ಕಾರ ಡಬ್ಬಲ್ ಮತದಾನದ ಭಾಗ್ಯವನ್ನು ಈ ಚುನಾವಣೆಯಲ್ಲಿ ಕರುಣಿಸಿದೆ. ಕಾನೂನು ಬಾಹೀರವಾಗಿ ನಡೆದುಕೊಳ್ಳಲಾಗಿದೆ. ಚುನಾವಣಾ ವ್ಯವಸ್ಥೆಯನ್ನೇ ಗಾಳಿಗೆ ತೂರಲಾಗಿದೆ. ಜೆಡಿಎಸ್ ಅಭ್ಯರ್ಥಿಯ ಪರವಾಗಿ 18ರಿಂದ 20 ಮಂದಿ ಕಾಂಗ್ರೆಸ್ ಶಾಸಕರು ಆತ್ಮಸಾಕ್ಷಿಯಾಗಿ ಮತ ಹಾಕಲು ಸಿದ್ದರಾಗಿದ್ದರು. ಅದನ್ನು ತಡೆಗಟ್ಟಲು ಚುನಾವಣಾ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ದೂರಿದರು.
ಅನ್ಯಾಯವನ್ನು ಪ್ರತಿಭಟಿಸುತ್ತಿದ್ದ ನಮ್ಮನ್ನು ಪೆÇಲೀಸರನ್ನು ಕರೆಸಿ ಹೊರ ಹಾಕಿ ಬೆದರಿಕೆ ಒಡ್ಡಲಾಗಿದೆ. ಶಾಸಕರ ಪಾಡೇ ಈ ರೀತಿಯಾದರೆ ಜನಸಾಮಾನ್ಯರ ಗತಿ ಏನು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಎರಡು ಮತದಾನಕ್ಕೆ ಅವಕಾಶ ನೀಡಿದ ನಿಯಮ ಬಾಹೀರ ಕ್ರಮವನ್ನು ವಿರೋಧಿಸಿ ಚುನಾವಣಾ ಆಯೋಗಕ್ಕೆ ನಾವು ಲಿಖಿತ ದೂರು ನೀಡಿದ್ದೇವೆ ಮತ್ತು ಚುನಾವಣಾ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.